ADVERTISEMENT

ಧಾರವಾಡಕ್ಕೆ ಕಾಯಂ ಪೀಠ ಅವಶ್ಯ - ಸಿರಿಯಾಕ್ ಜೋಸೆಫ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 8:20 IST
Last Updated 5 ಅಕ್ಟೋಬರ್ 2012, 8:20 IST

ಧಾರವಾಡ: `ಇಲ್ಲಿಯ ಹೈಕೋರ್ಟ್ ಸಂಚಾರಿ ಪೀಠವನ್ನು ಕಾಯಂ ಪೀಠವನ್ನಾಗಿ ಮಾಡಬೇಕಾಗಿದೆ. ಅದಕ್ಕೆ ಇಲ್ಲಿಯ ವಕೀಲರು ಪ್ರಯತ್ನ ಆರಂಭಿಸಬೇಕು. ನನ್ನ ಅವಧಿ (ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ) ಇನ್ನೂ 6 ತಿಂಗಳಿದ್ದರೆ ಕಾಯಂ ಪೀಠ ಆಗುತ್ತಿತ್ತು~ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಸಿರಿಯಾಕ್ ಜೋಸೆಫ್ ಅವರು ಹೇಳಿದರು.

ಹೈಕೋರ್ಟ್ ವಕೀಲರು ಸಂಘವು ಗುರುವಾರ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಹೈಕೋರ್ಟ್ ಸಂಚಾರಿ ಪೀಠಗಳನ್ನು ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಸ್ಥಾಪಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರನ್ನು ಕರೆಸಿ ಕೊಂಡು ಮಾತನಾಡಿದೆ.

ಒಂದೂವರೆ ವರ್ಷದ ಅವಧಿಯಲ್ಲಿ ಕಟ್ಟಡ ಪೂರ್ಣ ಗೊಂಡಿತು. ಪೀಠದ ಕಟ್ಟದ ಪೂರ್ಣ ಗೊಂಡ ಬಳಿಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ತೆರಳಿದ್ದರಿಂದ ಪೀಠಗಳನ್ನು ನೋಡಲು ಆಗಿರಲಿಲ್ಲ. ಈ ಕಟ್ಟಡ ನಿರ್ಮಾಣದ ಯಶಸ್ಸಿನಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್‌ಬನ್ನೂರಮಠ ಹಾಗೂ ಎನ್.ಕೆ.ಪಾಟೀಲ ಅವರು ಶ್ರಮವೂ ಇದೆ~ ಎಂದರು.

`ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯಾಗಿ, ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ನಿರ್ವಹಿ ಸಿದ್ದರೂ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಇಲ್ಲಿನ ವಾತಾವರಣ ಆ ರೀತಿ ಇತ್ತು. ನಾನು ಕರ್ನಾಟಕದ ಮಣ್ಣಿನ ಮಗನಲ್ಲ ದಿದ್ದರೂ ಈ ರಾಜ್ಯದ ಅಳಿಯ~ ಎಂದು ಅವರು ಸ್ಮರಿಸಿದರು.

ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್‌ಬನ್ನೂರಮಠ, `2004ರಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆ ಸಂಬಂಧ ಅಧಿಸೂಚನೆ ಹೊರಡಿಸಲಾಯಿತಾದರೂ ಅಷ್ಟೇನೂ ಪ್ರಗತಿ ಕಾಣಲಿಲ್ಲ. 2006ರಿಂದ 2008ರ ಅವಧಿ ಈ ನಿಟ್ಟಿನಲ್ಲಿ ಸುವರ್ಣ ಕಾಲ. ಅಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಿರಿಯಾಕ್ ಜೋಸೆಫ್ ಅವರು ಸಂಚಾರಿ ಪೀಠ ಕಟ್ಟಡದ ಪ್ರತಿ ಬಾಗಿಲು, ಕಿಟಕಿಯ ವಿನ್ಯಾಸವನ್ನೂ ವಿಶೇಷ ಆಸಕ್ತಿಯಿಂದ ಆಯ್ಕೆ ಮಾಡಿದ್ದರು~ ಎಂದು ಶ್ಲಾಘಿಸಿದರು.

ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿ, `ಉತ್ತರ ಕರ್ನಾಟಕದ ಬಡ ಕಕ್ಷಿದಾರರ ಬವಣೆಯನ್ನು 50 ವರ್ಷಗಳಾದರೂ ಯಾರೂ ಕೇಳಿರಲಿಲ್ಲ. ಆದರೆ ಜೋಸೆಫ್ ಅವರು ವಿಶೇಷ ಆಸಕ್ತಿ ವಹಿಸಿ ಕಟ್ಟಡ ಪೂರ್ಣವಾಗದಿದ್ದರೂ ನ್ಯಾಯದಾನದ ಪ್ರಕ್ರಿಯೆಯನ್ನು ಆರಂಭಿಸಲು ಸೂಚನೆ ನೀಡಿದರು~ ಎಂದರು.

ನ್ಯಾಯಮೂರ್ತಿಗಳಾದ ಎನ್‌ಕೆ.ಪಾಟೀಲ, ಬಿ.ವಿ.ಪಿಂಟೊ, ಎಚ್‌ಜಿ.ರಮೇಶ, ಹುಲವಾಡಿ ಜಿ.ರಮೇಶ, ಅಶೋಕ ಹಿಂಚಿಗೇರಿ ಭಾಗವಹಿಸಿದ್ದರು. ಶರ್ಮಿಳಾ ಪಾಟೀಲ ಸ್ವಾಗತಿಸಿದರು. ಅರವಿಂದ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಸಾದಿಕ್ ಗೂಡವಾಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.