ADVERTISEMENT

‘ಧಾರ್ಮಿಕ ತಳಹದಿಯ ನಾಡು ಉಚ್ಛ ಸಂಸ್ಕೃತಿಯ ಸಂಕೇತ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 7:15 IST
Last Updated 27 ನವೆಂಬರ್ 2017, 7:15 IST
ತಾಲ್ಲೂಕಿನ ಮುಗದ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಪುಣ್ಯಸಾಗರ ಮುನಿ ಮಹಾರಾಜರು ಮಾತನಾಡಿದರು
ತಾಲ್ಲೂಕಿನ ಮುಗದ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಪುಣ್ಯಸಾಗರ ಮುನಿ ಮಹಾರಾಜರು ಮಾತನಾಡಿದರು   

ಧಾರವಾಡ: 'ಧಾರ್ಮಿಕ ತತ್ವಗಳ ತಳಹದಿ ಮೇಲೆ ಬೆಳದಿರುವ ಈ ನಾಡು, ಉಚ್ಛ ಸಂಸ್ಕೃತಿಯ ಸಂಕೇತವಾಗಿದೆ. ಇಂದಿನ ಯುವಜನರು ಹಾಗೂ ಮಕ್ಕಳು ಧಾರ್ಮಿಕ ಸಂಸ್ಕಾರ ಪಡೆಯುವುದು ಅವಶ್ಯಕ' ಎಂದು ಪುಣ್ಯಸಾಗರ ಮುನಿ ಮಹಾರಾಜ ಹೇಳಿದರು.

ತಾಲ್ಲೂಕಿನ ಮುಗದ ಗ್ರಾಮದ ಪುರಾತನ ತೀರ್ಥಕ್ಷೇತ್ರದ ಜೈನ ಮಂದಿರದಲ್ಲಿ ಏರ್ಪಡಿಸಿದ್ದ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸಕಲ ಜೀವರಾಶಿಗಳಿಗೂ ಒಳ್ಳೆಯದಾಗಬೇಕು. ಲೋಕಲ್ಯಾಣಕ್ಕಾಗಿ ಪ್ರಾರ್ಥನೆ ಪೂಜೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಇದು ಧರ್ಮದ ಒಂದು ಭಾಗವಾಗಿದ್ದು, ಎಲ್ಲರೂ ಅಳವಡಿಸಿಕೊಳ್ಳಬೇಕು' ಎಂದರು.

'ಶತಮಾನದ ಹಿಂದೆ ಪ್ರತಿಷ್ಠಾಪನೆಗೊಂಡ ಭಗವಾನ ಶ್ರೀ 1008 ಆದಿನಾಥ ತೀರ್ಥಕರರನ್ನು ಶಿಖರಗರ್ಭ ಗುಡಿಯಲ್ಲಿ ಸ್ಥಾಪಿಸಿದ್ದು, ತದನಂತರ ನೂತನವಾಗಿ ಭಗವಾನ ಶ್ರೀ 1008 ಪಾರ್ಶ್ವನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದೀಗ ಭಗವಾನ ಶ್ರೀ 1108 ಪಾರ್ಶ್ವನಾಥ ತೀರ್ಥಂಕರರ ಹಾಗೂ ಮಾನಸ್ತಂಭದ ಚತುರ್ಮುಖ ಜಿನ ಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ' ಎಂದು ಹೇಳಿದರು. 

ADVERTISEMENT

ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, 'ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ತ್ಯಾಗದಿಂದ ಸಿದ್ಧಿ ಎಂಬ ಮಹಾನ್ ಸಂದೇಶವನ್ನು ಜನತೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಸಮಸ್ತ ಶ್ರಾವಕ, ಶ್ರಾವಕಿಯರು ಧರ್ಮ ಪ್ರಭಾವನೆಗಾಗಿ ನಿರಂತರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಧಾರ್ಮಿಕತೆ, ಸಂಸ್ಕೃತಿಯ ಪ್ರತಿರೂಪವಾಗಿರುವ ಪುರಾತನ ಮಂದಿರ ಜೀಣೋದ್ಧಾರಗೊಂಡು ನೂತನ ಶಿಖರ ಮಾನಸ್ತಂಭ ಹಾಗೂ ಕಲ್ಯಾಣ ಮಂಟಪ ನಿರ್ಮಾಣಗೊಂಡಿವುದು ಸಂತಸದ ವಿಷಯ' ಎಂದರು. ಸಮಾರಂಭದಲ್ಲಿ ಶ್ರೀ ಆದಿನಾಥ ದಿಗಂಬರ ಜೈನ ಟ್ರಸ್ಟ್‌ ಸದಸ್ಯರು ಹಾಗೂ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.