ADVERTISEMENT

ಪೊಲೀಸ್‌ ತಾರತಮ್ಯ: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 9:13 IST
Last Updated 4 ಮೇ 2018, 9:13 IST

ಧಾರವಾಡ: ‘ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ಪ್ರಶಾಂತ ನಾಯ್ಕ್, ಪಿಎಸ್‌ಐ ಆನಂದ ಠಕ್ಕನವರ ಅವರು ಸಚಿವ ವಿನಯ ಕುಲಕರ್ಣಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿ ಧಾರವಾಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ
ನಡೆಸಲಾಯಿತು.

‘ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಮೂಲಕ ಇಬ್ಬರ ವಿರುದ್ಧ ದೂರು ಸಲ್ಲಿಸಲಾಗಿದೆ. ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಕಳೆದ ವಾರವಷ್ಟೇ ಧಾರವಾಡ ಡಿವೈಎಸ್‌ಪಿ ಚಂದ್ರಶೇಖರ ಹಾಗೂ ಗರಗ ಪಿಎಸ್‌ಐ ಸಂಗಮೇಶ ಹಾಲಹಾವಿ ವಿರುದ್ಧವೂ ದೂರು ನೀಡಲಾಗಿದೆ. ಆದರೆ, ಜಿಲ್ಲಾಡಳಿತ ಅವರನ್ನು ಚುನಾವಣಾ ಸೇವೆಯಿಂದ ಹೊರಗಿಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಮೃತ ದೇಸಾಯಿ ಮಾತನಾಡಿ, ‘ಕಾಂಗ್ರೆಸ್ ಅಭ್ಯರ್ಥಿ ವಿನಯಕುಲಕರ್ಣಿ ಸೋಲಿನ ಭಯದಿಂದ ಕಂಗೆಟ್ಟಿದ್ದಾರೆ. ಹಾಗಾಗಿ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ನೇರವಾಗಿ ಬೆದರಿಕೆ ಹಾಕಿದರೆ, ಇನ್ನು ಕೆಲವರಿಗೆ ತಮ್ಮ ಬೆಂಬಲಿಗರ ಹಾಗೂ ಪೊಲೀಸರ ಮೂಲಕ ಒತ್ತಡ ಹಾಕುವ ಕೆಲಸ ಮಾಡಿಸುತ್ತಿದ್ದಾರೆ’ ಎಂದರು ಆರೋಪಿಸಿದರು.

ಬಿಜೆಪಿಯ ಮುಖಂಡ ಗುರುನಾಥಗೌಡ ಗೌಡರ ಅವರಿಗೆ ಪೊಲೀಸರು ಎನ್‌ಕೌಂಟರ್‌ ಮಾಡುತ್ತೇವೆ ಎಂದು ಹೇಳಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಗುರುನಾಥಗೌಡ ಇಂಥ ಬೆದರಿಕೆಗೆ ಹೆದರಿಲ್ಲ. ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈವರೆಗೂ ನೀಡಿದ ದೂರಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಇವರೆಲ್ಲರೂ ಸಚಿವರ ಅಣತಿಯಂತೆ ಕೆಲಸ ಮಾಡುವುದನ್ನು ಬಿಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುಖಂಡರಾದ ತವನಪ್ಪ ಅಷ್ಟಗಿ, ಶಂಕರ ಶೆಳಕೆ, ಗುರುನಾಥಗೌಡ, ದತ್ತಾ ಡೋರ್ಲೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.