ADVERTISEMENT

ಪ್ರಶ್ನೆ ಹೊತ್ತು ಬಂದರು, ಉತ್ತರ ಪಡೆದು ನಿರಾಳರಾದರು...

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನಿಂದ ಎಡ್ಯುವರ್ಸ್‌ ಶೈಕ್ಷಣಿಕ ಮೇಳ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:54 IST
Last Updated 3 ಜೂನ್ 2018, 8:54 IST
ಸಿಇಟಿ ಕುರಿತು ಡಾ.ಎ.ಎಸ್‌. ರವಿ ಉಪನ್ಯಾಸ ನೀಡಿದರು
ಸಿಇಟಿ ಕುರಿತು ಡಾ.ಎ.ಎಸ್‌. ರವಿ ಉಪನ್ಯಾಸ ನೀಡಿದರು   

ಹುಬ್ಬಳ್ಳಿ: ನನ್ನ ಮಗಳ ರ‍್ಯಾಂಕಿಂಗ್ 17 ಸಾವಿರ ಇದೆ. ವೆಟರ್ನರಿಯಲ್ಲಿ ಸೀಟು ಸಿಗುತ್ತದೆಯೇ? ಆಪ್ಷನ್‌ ಎಂಟ್ರಿಯಲ್ಲಿ ಮೊದಲ ಚಾಯ್ಸ್‌ ಓಕೆ ಮಾಡಿ ಸೀಟು ಪಡೆದರೂ ಮತ್ತೆ ಬೇರೆ ಕಾಲೇಜಿನ ಸೀಟು ಸಿಗುವುದೇ? ನನ್ನ ಮಗ ಲಂಡನ್‌ನಲ್ಲಿ ಹುಟ್ಟಿದ್ದಾನೆ. ಇಲ್ಲಿ ಎಂಜಿನಿಯರಿಂಗ್‌ ಸೀಟು ಪಡೆಯಲು ಏನು ಮಾಡಬೇಕು...

ಹೀಗೆ ಹತ್ತಾರು ಬಗೆಯ ಪ್ರಶ್ನೆಗಳನ್ನು ಹೊತ್ತು ತಂದ ಪೋಷಕರು ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರಗಳನ್ನು ಪಡೆದು ಮಕ್ಕಳ ಮುಂದಿನ ಭವಿಷ್ಯ ಯೋಚಿಸುತ್ತಾ ಮನೆಯತ್ತ ತೆರಳಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಏರ್ಪಡಿಸಿರುವ ಎರಡು ದಿನಗಳ ಎಡ್ಯುವರ್ಸ್‌ ಶೈಕ್ಷಣಿಕ ಮೇಳದಲ್ಲಿ ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌. ರವಿ ಅವರು ಸಿಇಟಿ ಪರೀಕ್ಷೆ ಬಳಿಕ ಮೆಡಿಕಲ್‌, ಎಂಜಿನಿಯರಿಂಗ್‌, ಆಯುಷ್, ಡೆಂಟಲ್‌, ಆರ್ಕಿಟೆಕ್ಚರ್‌ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ಕುರಿತ ‍ಪೋಷಕರ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ADVERTISEMENT

‘ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬಹುದಾದರೂ, ಮಕ್ಕಳು ಯಾವ ಕೋರ್ಸ್‌ ಅಧ್ಯಯನ ಮಾಡಲು ಬಯಸುತ್ತಾರೆ ಎನ್ನುವುದನ್ನು ತಿಳಿದುಕೊಂಡು. ಅದಕ್ಕೆ ಪ್ರೋತ್ಸಾಹ ನೀಡಬೇಕು’ ಎಂದರು.

‘ಸೀಟು ಆಯ್ಕೆಗೆ ಆನ್‌ಲೈನ್‌ನಲ್ಲಿ ಅಪ್ಷನ್‌ ಎಂಟ್ರಿ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಮೊದಲ ಹಂತದಲ್ಲಿ ಹಲವಾರು ಕಾಲೇಜು ಹಾಗೂ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದರೂ, ಉತ್ತಮ ಸೌಲಭ್ಯವಿರುವ ಕಾಲೇಜುಗಳನ್ನೇ ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬೇಕು. ಉತ್ತಮ ರ‍್ಯಾಂಕಿಂಗ್‌ ಪಡೆದಿರುವ ವಿದ್ಯಾರ್ಥಿಗಳಿಗೆ ಅವರು ಬಯಸಿದ ಕಾಲೇಜುಗಳಲ್ಲಿ ಸೀಟು ದೊರೆಯುತ್ತದೆ’ ಎಂದರು.

ರಹಸ್ಯ ಪಾಸ್‌ವರ್ಡ್ ಬಹಿರಂಗ ಬೇಡ: ‘ಆಪ್ಷನ್ ಎಂಟ್ರಿ ಮಾಡಲು ಪರೀಕ್ಷಾ ಪ್ರಾಧಿಕಾರವು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ರಹಸ್ಯ ಪಾಸ್‌ವರ್ಡ್‌ ಕೊಟ್ಟಿರುತ್ತದೆ. ಅದನ್ನು ತಂದೆ–ತಾಯಿ ಜೊತೆ ಹಂಚಿಕೊಳ್ಳಿ. ಬೇರೆಯವರೊಂದಿಗೆ ಹಂಚಿಕೊಂಡರೆ ಅವರು ಅಕ್ರಮವಾಗಿ ಲಾಗಿನ್‌ ಆಗಿ ನಿಮ್ಮ ಆಯ್ಕೆಗಳನ್ನು ತಪ್ಪಾಗಿ ದಾಖಲಿಸಿ ಅಂತಿಮವಾಗಿ ಸೀಟು ಸಿಗದಂತೆ ಮಾಡುವ ಸಾಧ್ಯತೆ ಇದೆ. ಈ ವಿಚಾರವಾಗಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ಮಾಡಿದರು.

‘ನೀವು ಬಯಸಿದ ಕೋರ್ಸ್ ಸಿಗುವ ಖಾತ್ರಿ ಇದ್ದರೆ, ಬೇರೆ ಕೋರ್ಸ್ ಅಥವಾ ಕಾಲೇಜು ಆಯ್ಕೆಗಾಗಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬಾರದು. ಬಯಸಿದ ಕಾಲೇಜಿಗೆ ನಿಗದಿತ ದಿನಾಂಕದೊಳಗೆ ತೆರಳಿ ಶುಲ್ಕ ಪಾವತಿಸಬಹುದು. ಅಲ್ಲಿ ಪ್ರವೇಶ ಪಡೆದಿರುವ ಬಗ್ಗೆ ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಐಐಟಿ ಸೇರಲು ಹೋಗಿ ಬೇಸ್ತು ಬಿದ್ದರು!

ಹಳ್ಳಿಗಾಡಿನಿಂದ ಬಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಪ್ಷನ್‌ ಎಂಟ್ರಿ ಮಾಡುವ ಸಂದರ್ಭದಲ್ಲಿ ಹೇಗೆ ಮೋಸ ಹೋಗುತ್ತಾರೆ ಎಂಬುದನ್ನು ಎ.ಎಸ್‌. ರವಿ ಉದಾಹರಣೆ ಮೂಲಕ ತಿಳಿಸಿದರು.

‘ಐಐಟಿಗೆ ಸೀಟು ಸಿಕ್ಕಿತು ಎಂಬ ಖುಷಿಯಲ್ಲಿ ಐಐಟಿ ಹೆಸರಿನ ಕಾಲೇಜನ್ನು ಆರಿಸಿಕೊಂಡರು. ಅಲ್ಲಿ ಸೀಟೂ ಸಿಕ್ಕಿತು. ಆದರೆ, ಆ ವಿದ್ಯಾರ್ಥಿ ಅಂದುಕೊಂಡಂತೆ ಅದು ಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಆಗಿರಲಿಲ್ಲ. ಬದಲಾಗಿ ಬೆಂಗಳೂರು ಹೊರವಲಯದಲ್ಲಿರುವ ಇಂಡಿಯನ್ ಇಸ್ಲಾಮಿಕ್‌ ಟೆಕ್ನಾಲಜಿ (ಐಐಟಿ) ಹೆಸರಿನ ಎಂಜಿನಿಯರಿಂಗ್‌ ಕಾಲೇಜು ಆಗಿತ್ತಷ್ಟೇ. ತಾವು ತಪ್ಪು ಕಾಲೇಜು ಆಯ್ಕೆ ಮಾಡಿಕೊಂಡಿದ್ದು ಗೊತ್ತಾಗುತ್ತಿದ್ದಂತೆಯೇ ನಮ್ಮ ಬಳಿ ತೆರಳಿ ಗೋಳು ತೋಡಿಕೊಂಡರು. ಆದರೆ, ಆಗ ನಾವು ಯಾವ ಸಹಾಯವನ್ನೂ ಮಾಡಲಾಗಲಿಲ್ಲ. ಅಷ್ಟಕ್ಕೂ, ಐಐಟಿ ಆಯ್ಕೆ ಪ್ರಕ್ರಿಯೆಯನ್ನು ಪ್ರಾಧಿಕಾರ ಮಾಡುವುದೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.