ADVERTISEMENT

ಫ್ಲೋರೈಡ್‌ಯುಕ್ತ ನೀರು ಪೂರೈಕೆ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 10:05 IST
Last Updated 22 ಅಕ್ಟೋಬರ್ 2011, 10:05 IST
ಫ್ಲೋರೈಡ್‌ಯುಕ್ತ ನೀರು ಪೂರೈಕೆ!
ಫ್ಲೋರೈಡ್‌ಯುಕ್ತ ನೀರು ಪೂರೈಕೆ!   

ಹುಬ್ಬಳ್ಳಿ: `ನೀರಿನ ಗಾಡಿ ಬಂದರೂ, ಬರದಿದ್ದರೂ ಇದೇ ನೀರು ನಮಗೆ ನೋಡ್ರಿ~ ಎನ್ನುತ್ತಾ ಕೆಲವು ದಿನಗಳ ಹಿಂದಷ್ಟೇ ಸುರಿದ ಮಳೆಗೆ ಕೆಂಪಡರಿದ ನೀರನ್ನು ತಿಳಿಯಾಗಿಸಿ ಬಿಂದಿಗೆಗೆ ಸಂಗ್ರಹಿಸುವ ವ್ಯರ್ಥ ಸಾಹಸದಲ್ಲಿ ತೊಡಗಿದ್ದರು ಹುಬ್ಬಳ್ಳಿ ತಾಲ್ಲೂಕು ನಾಗರಹಳ್ಳಿಯ ಚನ್ನಮ್ಮ..

ಬರ ಪರಿಹಾರ ಕಾಮಗಾರಿಯಡಿ ಜಿಲ್ಲಾಡಳಿತ ಪೂರೈಸುವ ದಿನಕ್ಕೆ ಎರಡು ಬಿಂದಿಗೆಯಷ್ಟು ಸವಳು (ಫ್ಲೋರೈಡ್‌ಯುಕ್ತ) ನೀರಿನ ಬದಲು ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಮಂಡಿ ನೆನೆಯುವಷ್ಟು ನೀರು ಸಂಗ್ರಹವಾಗಿದ್ದ ಕೆರೆಯ ಮೊರೆ ಹೋಗಿದ್ದರು.

`ಪ್ರಜಾವಾಣಿ~ ಗ್ರಾಮಕ್ಕೆ ಭೇಟಿ ನೀಡಿದಾಗ `ಪಡಿತರ ಧಾನ್ಯದ ರೀತಿ ಮನೆಗೆ ಎರಡು ಬಿಂದಿಗೆ ನೀರು ಕೊಡುತ್ತಾರೆ. ಅದು ಕುಡಿಯಲು ಯೋಗ್ಯ ವಾಗಿಲ್ಲ~ ಎಂದು ಚನ್ನಮ್ಮ ಅಳಲು ತೋಡಿ ಕೊಂಡರು. ಆಕೆಯೊಂದಿಗೆ ಧ್ವನಿಗೂಡಿಸಿದ ಗ್ರಾಮಸ್ಥರು ತಮ್ಮೂರಿನ ಕುಡಿಯುವ ನೀರಿನ ಬವಣೆಯನ್ನು ಬಿಚ್ಚಿಟ್ಟರು.

ಸರ್ಕಾರ ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ನವಲ ಗುಂದ ತಾಲ್ಲೂಕಿನಲ್ಲಿ ಬೆಳೆ ಒಣಗಿದ್ದರೂ, ಮಲ ಪ್ರಭಾ ಕಾಲುವೆ ಹರಿದಿರುವುದರಿಂದ ಮಗ್ಗಿಗುಡ್ಡ ಹೊರತುಪಡಿಸಿ ಉಳಿದೆಡೆ ಕುಡಿಯುವ ನೀರಿನ ತೊಂದರೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.

ಕುಂದಗೋಳ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ ಇದ್ದು, ತಾಲ್ಲೂಕಿನ ಕುರಹಟ್ಟಿ, ಕಡಬಕಟ್ಟಿ, ಯರಗುಪ್ಪಿ, ಮುಳ್ಳಳ್ಳಿ, ಯರಿನಾರಾಯಣಪುರ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ನಾಗರಹಳ್ಳಿಯನ್ನು ತೀವ್ರ ಕುಡಿಯುವ ನೀರಿನ ಅಭಾವದ ಗ್ರಾಮಗಳು ಎಂದು ಜಿಲ್ಲಾಡಳಿತ ಗುರ್ತಿಸಿ ಕುಂದಗೋಳ ಹಾಗೂ ಹುಬ್ಬಳ್ಳಿಯಿಂದ ಟ್ರ್ಯಾಕ್ಟರ್‌ಗಳಲ್ಲಿ ನೀರು ಪೂರೈ ಸಲು ಮುಂದಾಗಿತ್ತು.

ಫ್ಲೋರೈಡ್ ನೀರು ಪೂರೈಕೆ: ಜಿಲ್ಲಾಡಳಿತದಿಂದ ಗ್ರಾಮಕ್ಕೆ ಪೂರೈಸುತ್ತಿರುವ ನೀರು ಫ್ಲೊರೈಡ್‌ಯುಕ್ತವಾಗಿದೆ ಎಂಬುದು ನಾಗರಹಳ್ಳಿ ಹಾಗೂ ಪಕ್ಕದ ಯರಿನಾರಾಯಣಪುರ ಗ್ರಾಮಸ್ಥರ ಆರೋಪ. `ಇಲ್ಲಿ ಬಾವಿ ತೋಡಿದರೆ ಸವಳು (ಫ್ಲೋರೈಡ್) ನೀರು ಸಿಗುತ್ತದೆ. ಅದು ಕುಡಿಯಲು ಯೋಗ್ಯವಾಗಿಲ್ಲ ಎಂಬ ಕಾರಣಕ್ಕೆ ಕೆರೆಯ ನೀರನ್ನು ಕುಡಿಯುತ್ತಿದ್ದೆವು. ಈಗ ಹುಬ್ಬಳ್ಳಿ ದೂರ ವಾಗುತ್ತದೆ ಎಂದು ಗುತ್ತಿಗೆದಾರರು ಬಂಡಿವಾಡ ಕ್ರಾಸ್‌ನ ಕೊಳವೆ ಬಾವಿಯೊಂದರಿಂದ ನೀರು ಕೊಡುತ್ತಿದ್ದಾರೆ. ಅದು ಫ್ಲೋರೈಡ್‌ಯುಕ್ತವಾಗಿದೆ ಎಂದು ನಾಗರಹಳ್ಳಿ ಗ್ರಾಮದ ಚಂದ್ರಪ್ಪ ಅರಳೀ ಕಟ್ಟಿ ದೂರುತ್ತಾರೆ.

`ಮೊದಲು ನಾಲ್ಕು ದಿನ ನೀರು ಕೊಟ್ಟರು. ಮಳೆ ಬಂದು ಕೊಳವೆ ಬಾವಿ ಇರುವ ಹೊಲಕ್ಕೆ ಟ್ರ್ಯಾಕ್ಟರ್ ಹೋಗುವುದಿಲ್ಲ ಎಂದು ಎರಡು ದಿನಗಳಿಂದ ನೀರು ಕೊಟ್ಟಿರಲಿಲ್ಲ. ಇಂದಿನಿಂದ ಮತ್ತೆ ಆರಂಭಿಸಿದ್ದಾರೆ. ದಿನಕ್ಕೆ ಮೂರು ಬಾರಿ ಟ್ರ್ಯಾಕ್ಟರ್‌ನಲ್ಲಿ ನೀರು ಬರುತ್ತದೆ.
 
1,500 ಜನಸಂಖ್ಯೆ ಇರುವ ಗ್ರಾಮಕ್ಕೆ ಅದು ಸಾಲುವುದಿಲ್ಲ. ಕೊನೆಗೆ ಊರ ಕೆರೆಯನ್ನೇ ಆಶ್ರಯಿಸುವಂತಾಗಿದೆ. ನೀರು ಮಲಿನವಾಗಿದ್ದರೂ ಕಾಯಿಸಿ ಕುಡಿಯುತ್ತೇವೆ. ಉಳಿದಂತೆ ನಿತ್ಯ ಬಳಕೆಗೆ ಉಪಯೋಗಿಸುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಶಾಂತವ್ವ ಗಿಡ್ಡಪ್ಪ ಹೇಳುತ್ತಾರೆ.

ಕುಂದಗೋಳ ತಾಲ್ಲೂಕಿಗೆ ಸೇರಿದರೂ ಹುಬ್ಬಳ್ಳಿಗೆ ಹತ್ತಿರವಿರುವ ಯರಿನಾರಾಯಣ ಪುರದಲ್ಲಿ ಅದೇ ಪರಿಸ್ಥಿತಿ ಇದೆ. ಗುತ್ತಿಗೆದಾರರು ಪೂರೈಸುವ ಫ್ಲೋರೈಡ್‌ಯುಕ್ತ ನೀರು ಕುಡಿದರೆ ಭೇದಿ ಹಾಗೂ ಬಾಯಲ್ಲಿ ಹುಣ್ಣು ಕಾಣಿಸಿ ಕೊಳ್ಳುತ್ತಿದೆ. ಎರಡು ದಿನದ ಹಿಂದೆ ಮಳೆ ಸುರಿದು ಊರ ಕೆರೆಯಲ್ಲಿ ನೀರು ನಿಂತಿದೆ ಅದನ್ನೇ ಬಳಸು ತ್ತೇವೆ ಎನ್ನುತ್ತಾರೆ ಯರಿನಾರಾಯಣಪುರದ ಆನಂದಗೌಡ ಪಾಟೀಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.