ADVERTISEMENT

ಬೇಡಿಕೆ ಈಡೇರಿಸುವ ಭರವಸೆ: ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 10:16 IST
Last Updated 14 ಜೂನ್ 2017, 10:16 IST
ಪೌರಕಾರ್ಮಿಕರು ಹುಬ್ಬಳ್ಳಿಯ ಪಾಲಿಕೆ ಕಚೇರಿ ಮುಂದೆ ವಿಜಯೋತ್ಸವ ಆಚರಿಸಿ, ತಮಟೆ ಸದ್ದಿಗೆ ಹೆಜ್ಜೆ ಹಾಕಿದರು
ಪೌರಕಾರ್ಮಿಕರು ಹುಬ್ಬಳ್ಳಿಯ ಪಾಲಿಕೆ ಕಚೇರಿ ಮುಂದೆ ವಿಜಯೋತ್ಸವ ಆಚರಿಸಿ, ತಮಟೆ ಸದ್ದಿಗೆ ಹೆಜ್ಜೆ ಹಾಕಿದರು   

ಹುಬ್ಬಳ್ಳಿ: ಪೌರ ಕಾರ್ಮಿಕರ ಬೇಡಿಕೆ­ಗಳನ್ನು ಈಡೇರಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಭರವಸೆ ನೀಡಿರುವುದರಿಂದ ನಗರದ ಪಾಲಿಕೆ ಕಚೇರಿ ಎದರು ನಡೆಸಲಾಗುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರ ಕೈಬಿಟ್ಟು,  ವಿಜಯೋತ್ಸವ ಆಚರಿಸಿದರು.

ಬೆಂಗಳೂರಿನ ಬನ್ನಪ್ಪ ಉದ್ಯಾನದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾದ ಸಚಿವ ಆಂಜನೇಯ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದ ವಿಷಯ ತಿಳಿಯುತ್ತಿದ್ದಂತೆ ಧರಣಿನಿರತ ಪೌರ ಕಾರ್ಮಿಕರ ಸಂತಸಕ್ಕೆ ಪಾರವೇ ಇರಲಿಲ್ಲ.

ಧರಣಿ ಅಂತ್ಯಗೊಳಿಸಿ ಗುಲಾಲ್‌ ಎರಚಿಕೊಂಡು ಪೌರ ಕಾರ್ಮಿಕರು ಕುಣಿದು ಕುಪ್ಪಳಿಸಿದರು. ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಹೋಗಿ ವಿಜಯೋತ್ಸವ ಆಚರಿಸಿದರು.

ADVERTISEMENT

ರೈಲು ನಿಲ್ದಾಣದ ಅಂಬೇಡ್ಕರ್‌ ಪ್ರತಿಮೆ ಎದುರೂ ಪೌರ ಕಾರ್ಮಿಕರ ಮುಖಂಡ ಬಾಬು ಬಳ್ಳಾರಿ ನೇತೃತ್ವದಲ್ಲಿ ಪೌರಕಾರ್ಮಿಕರು ವಿಜಯೋತ್ಸವ ಆಚರಿಸಿದರು. ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

‘ರಾಜ್ಯದಲ್ಲಿ ಒಟ್ಟು 45 ಸಾವಿರ ಪೌರಕಾರ್ಮಿಕರಿಗೆ ಗುತ್ತಿಗೆ ಪದ್ಧತಿಯಿಂದ ಮುಕ್ತಿ ದೊರಕಲಿದೆ. ಗುತ್ತಿಗೆ ಪದ್ಧತಿ ರದ್ದು ಮಾಡಿ 17,000 ಪೌರ ಕಾರ್ಮಿಕರನ್ನು ಹಂತ, ಹಂತವಾಗಿ ನೇಮಕಾತಿ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿ ಇದೇ 20ರಂದು ಸಚಿವ ಸಂಪುಟ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಎಚ್‌. ಆಂಜನೇಯ ತಿಳಿಸಿದ್ದಾರೆ. ಕೊನೆಗೂ ಪೌರಕಾರ್ಮಿಕರ ಹೋರಾಟಕ್ಕೆ ಜಯ ದೊರಕಿದೆ’ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 2,300 ಗುತ್ತಿಗೆ ಪೌರಕಾರ್ಮಿಕರು ಇದ್ದು, 800 ಮಂದಿ ಕಾಯಂ ನೌಕರರು ಇದ್ದಾರೆ. ಗುತ್ತಿಗೆ ನೌಕರರ ಕಾಯಂ ಮಾಡುವುದರಿಂದ ಕನಿಷ್ಠ ವೇತನ ₹17,685 ಸಿಗಲಿದೆ. ಇನ್ನು ಮುಂದಾದರೂ ಪೌರಕಾರ್ಮಿಕರು ಗೌರವಯುತ ಜೀವನ ನಡೆಸಬಹುದು’ ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಲ್ಲೂ ಕಸದ ರಾಶಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ­ಕಾರ್ಮಿಕರು ಸ್ವಚ್ಛತೆ ಸ್ಥಗಿತಗೊಳಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರಿಂದ ನಗರದ ವಿವಿಧೆಡೆ ಕಸದ ರಾಶಿ ಕಂಡುಬಂತು.

ಬಹುತೇಕ ಬಡಾವಣೆಯ ಕಂಟೇನರ್‌ಗಳ ತುಂಬ ಕಸ ತುಂಬಿ ಹೊರಚೆಲ್ಲಿ ದುರ್ನಾತ ಬೀರುತ್ತಿತ್ತು. ಕೆಲವೆಡೆ ರಸ್ತೆ ತುಂಬೆಲ್ಲಾ ಹರಡಿ­ಕೊಂಡಿತ್ತು. ಇದರಿಂದ ನಾಗರಿಕರು ತೊಂದರೆ ಅನುಭವಿಸಿದರು. ಮುಷ್ಕರದ ಕಾರಣ ಮನೆ, ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವುದನ್ನು ಕಾರ್ಮಿಕರು ನಿಲ್ಲಿಸಿದ್ದರು.

ದೇಶಪಾಂಡೆನಗರ, ವಿದ್ಯಾನಗರ, ಸಿದ್ದೇಶ್ವರ ಪಾರ್ಕ್‌, ಲಿಂಗರಾಜನಗರ, ವಿಶ್ವೇಶ್ವರನಗರ, ನವನಗರ, ಲೋಕಪ್ಪನ ಹಕ್ಕಲ, ಈಶ್ವರ ನಗರ, ಹಳೇ ಹುಬ್ಬಳ್ಳಿಯಲ್ಲಿ ಕಸದ ರಾಶಿ ಕಂಡು­ಬಂದವು. ಕೆಲ ನಾಕರಿಕರು ಪಾಲಿಕೆ ನಿಯಂತ್ರಣಾ ಕೊಠಡಿಗೆ ದೂರವಾಣಿ ಕರೆ ಮಾಡಿ ಕಸದ ರಾಶಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

‘ಬೇಡಿಕೆ ಈಡೇರಿಕೆಯ ಭರವಸೆ ನೀಡಿರುವುದರಿಂದ ಮುಷ್ಕರ ಅಂತ್ಯಗೊಳಿಸಲಾಗಿದೆ. ಬುಧವಾರದಿಂದ ಪೌರಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ಮರಳಲಿದ್ದಾರೆ’ ಎಂದು ವಿಜಯ ಗುಂಟ್ರಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.