ADVERTISEMENT

ಬೇಸಿಗೆಯಲ್ಲಿ ಬಾಯಾರಿಕೆ ತಣಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 9:00 IST
Last Updated 16 ಮಾರ್ಚ್ 2012, 9:00 IST

ಹುಬ್ಬಳ್ಳಿ: ಈ ಬಾರಿಯ ಬೇಸಿಗೆಯಲ್ಲಿ ಅವಳಿ ನಗರದ ಜನರಿಗೆ ಕುಡಿವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿರುವ ಜಲಮಂಡಳಿ ಮಲಪ್ರಭಾ ಜಲಾಶಯದಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಹೆಸ್ಕಾಂನಿಂದ ನಿರಂತರ ವಿದ್ಯುತ್ ಪಡೆಯಲು ಈಗಿನಿಂದಲೇ ಸಿದ್ಧತೆ ನಡೆಸಿದೆ.

ಜಲಾಶಯದಲ್ಲಿ ಈಗ 2,041ಅಡಿ ನೀರಿದ್ದು, ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕಡುಬೇಸಿಗೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜಲಾಶಯದ ಮಟ್ಟ 2032 ಅಡಿ ನೀರಿಗಿಂತ ಕೆಳಗೆ ಇಳಿಯದಂತೆಯೂ ನೋಡಿಕೊಳ್ಳಬೇಕಿದೆ. ಜಲಾಶಯದ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಬಾರಿ ಅವಧಿಗೆ ಮುನ್ನವೇ ಕೃಷಿ ಉದ್ದೇಶಕ್ಕೆ ನೀರು ಪೂರೈಕೆ ನಿಲ್ಲಿಸಲಾಗಿದೆ. ಮಲಪ್ರಭಾ ಅಚ್ಚುಕಟ್ಟು ಭಾಗದವರ ಒತ್ತಾಯಕ್ಕೆ ಮಣಿದು ಮತ್ತೆ ಕಾಲುವೆಗೆ ನೀರು ಹರಿಸದಂತೆ ಈಗಾಗಲೇ ಧಾರವಾಡ ಜಿಲ್ಲಾಧಿಕಾರಿಗೆ ಜಲಮಂಡಳಿ ಮನವಿ ಮಾಡಿದೆ.

ಪ್ರಾದೇಶಿಕ ಆಯುಕ್ತರಿಗೆ ಪತ್ರ:  ರೋಣ, ಬಾದಾಮಿ ಹಾಗೂ ಬಾಗಲಕೋಟೆ ನಗರಗಳಿಗೆ ನೀರು ಪೂರೈಸಲು ಮಲಪ್ರಭೆಯಿಂದ ಹಾಲಿ 15 ದಿನಕ್ಕೊಮ್ಮೆ 0.5 ಟಿಎಂಸಿಯಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಕೆಗೆ ತೀವ್ರ ತೊಂದರೆಯಾಗಲಿದೆ. ಆ ಭಾಗದಲ್ಲಿ ಮಲಪ್ರಭೆ  ನೀರನ್ನು ಅವಲಂಬಿಸದೆ ಕೋಯ್ನಾ ಜಲಾಶಯದಿಂದ ನೀರು ಪಡೆದುಕೊಳ್ಳುವುದೂ ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕಳೆದ ಫೆಬ್ರುವರಿ 21ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಜಲಮಂಡಳಿ ಪತ್ರ ಬರೆದು ಕೋರಿದೆ.

ಅವಳಿ ನಗರಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆಗೆ ದಿನನಿತ್ಯ 200 ದಶಲಕ್ಷ ಲೀಟರ್ ನೀರು ಅಗತ್ಯವಿದ್ದು, ಪ್ರಸ್ತುತ ಸವದತ್ತಿಯ ಮಲಪ್ರಭಾ ನದಿ ಜಾಕ್‌ವೆಲ್‌ನಿಂದ ಅಮ್ಮಿನಬಾವಿ ನೀರು ಶುದ್ಧೀಕರಣ ಕೇಂದ್ರಕ್ಕೆ 155 ದಶಲಕ್ಷ ಲೀಟರ್ ನೀರು ತಂದು ಧಾರವಾಡ ಹಾಗೂ ಹುಬ್ಬಳ್ಳಿಗೆ ಪೂರೈಸಲಾಗುತ್ತಿದೆ. ಇನ್ನೊಂದೆಡೆ ನೀರಸಾಗರ ಕೆರೆಯಿಂದ ಹುಬ್ಬಳ್ಳಿ ನಗರಕ್ಕೆ 40 ದಶಲಕ್ಷ ಲೀಟರ್ ನೀರು ಕೊಡಲಾಗುತ್ತಿದೆ.

ವಿದ್ಯುತ್ ಕೊರತೆಯ ಆತಂಕ:
ಜಲಾಶಯದಲ್ಲಿ ನೀರು ಉಳಿಸಿಕೊಂಡರೂ ಬೇಸಿಗೆಯಲ್ಲಿ ನೀರು ಪೂರೈಕೆಗೆ ವಿದ್ಯುತ್ ದೊರೆಯುವುದೇ ಎಂಬ ಆತಂಕ ಜಲಮಂಡಳಿ ಅಧಿಕಾರಿಗಳನ್ನು ಕಾಡುತ್ತಿದೆ. ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಸಿದ್ಧನಾಯಕ, `ಸವದತ್ತಿ ಜಾಕ್‌ವೆಲ್‌ನಲ್ಲಿ ನಾಲ್ಕು ಹಾಗೂ ನೀರಸಾಗರದಲ್ಲಿ ಎರಡು ಒಟ್ಟು 6 ನೀರು ಪಂಪ್ ಮಾಡುವ ಯಂತ್ರಗಳಿವೆ.

ಇವುಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡದಂತೆ ಹೆಸ್ಕಾಂಗೆ ಸೂಚಿಸಲು  ವಿಡಿಯೊ ಕಾನ್ಫರೆನ್ಸ್ ಮೂಲಕ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರಿಗೆ ಕಳೆದ ವಾರ ಮನವಿ ಮಾಡಲಾಗಿದೆ. ಜತೆಗೆ ಹೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ~ ಎನ್ನುತ್ತಾರೆ.

ಟ್ಯಾಂಕರ್ ಸಿದ್ಧ: ನಿರ್ವಹಣೆ ಸಮಸ್ಯೆ, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ನಿಯಮಿತವಾಗಿ ನೀರು ಪೂರೈಕೆಯಾಗದ ಅವಳಿ ನಗರದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಜಲಮಂಡಳಿ ನೀರು ಒದಗಿಸಲಿದೆ. ಜಲಮಂಡಳಿಯಿಂದ ನೀರು ಪೂರೈಕೆಯಾಗದ ಪ್ರದೇಶದ ನಿವಾಸಿಗಳಿಗೆ ನೆರವಾಗಲು ಧಾರವಾಡದಲ್ಲಿ ಐದು ಹಾಗೂ ಹುಬ್ಬಳ್ಳಿಯಲ್ಲಿ 18 ಟ್ಯಾಂಕರ್‌ಗಳನ್ನು ಒದಗಿಸಲಾಗಿದೆ  ಎಂದು ಸಿದ್ಧನಾಯಕ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.