ADVERTISEMENT

ಬ್ಯಾಂಕ್‌ಗಳ ಕಾರ್ಯವೈಖರಿ ಖಂಡಿಸಿ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 21 ಮೇ 2012, 5:50 IST
Last Updated 21 ಮೇ 2012, 5:50 IST
ಬ್ಯಾಂಕ್‌ಗಳ ಕಾರ್ಯವೈಖರಿ ಖಂಡಿಸಿ ರೈತರ ಧರಣಿ
ಬ್ಯಾಂಕ್‌ಗಳ ಕಾರ್ಯವೈಖರಿ ಖಂಡಿಸಿ ರೈತರ ಧರಣಿ   

ಅಣ್ಣಿಗೇರಿ: `ಅತಿವೃಷ್ಟಿ ಮತ್ತು ಬರಗಾಲ ಸಂದರ್ಭಕ್ಕೆ ಸಂಬಂಧಿಸಿದಂತೆ ರಿಜರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ಆಧೀನ ಬ್ಯಾಂಕುಗಳು ಅನುಸರಿಸದೆ ರೈತರಿಗೆ ಘೋರ ಅನ್ಯಾಯ ಎಸಗುತ್ತಿವೆ~ ಎಂದು ಆರೋಪಿಸಿ ಸ್ಥಳೀಯ ರೈತ ಮುಖಂಡ ಎ.ಪಿ. ಗುರಿಕಾರ ನೇತೃತ್ವದಲ್ಲಿ ಕಳೆದ ಹಲವು ದಿನಗಳಿಂದ ರೈತರು ಸಾಂಕೇತಿಕ ಧರಣಿ ನಡೆಸುತ್ತಿದ್ದಾರೆ.

ಇದಕ್ಕೆಲ್ಲಾ ಲೀಡ್ ಬ್ಯಾಂಕ್ ಮ್ಯೋನೇಜರ್ ಬಸವರಾಜಪ್ಪ ಕಾರಣರಾಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹಾಗೂ ರೈತರಿಗಾದ ಹಾನಿಯನ್ನು ಅವರಿಂದ ತುಂಬಿಸಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಸ್ಥಳೀಯ ಅಮೃತೇಶ್ವರ ಬಯಲಲ್ಲಿ ಅರಳಿ ಮರದ ಕೆಳಗೆ ಪ್ರತಿದಿನ ಒಂದು ತಾಸು ಧರಣಿ ಕುಳಿತುಕೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ.ಅತಿವೃಷ್ಟಿ ಮತ್ತು ಬರಗಾಲದ ಹಿನ್ನೆಲೆಯಲ್ಲಿ ರೈತರು ಯೂನಿಯನ್ ಬ್ಯಾಂಕಿನಿಂದ ಪಡೆದ ಮೂಲ ಸಾಲದಲ್ಲಿ ಆ ಬ್ಯಾಂಕು ಈಗಾಗಲೇ ಶೇ 15ರಷ್ಟು ಸಾಲವನ್ನು ಮನ್ನಾ ಮಾಡಿದ್ದು ಅದು ಶೇ 25 ರಿಂದ 40ರ ವರೆಗೆ ಆಗಬೇಕು.

  ರೈತರ ವಿರುದ್ಧ ದಾಖಲಿಸಿದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಮುಂಗಾರು ಬಿತ್ತನೆ ಆರಂಭವಾಗಿದ್ದರಿಂದ ಹೊಸ ಸಾಲ ನೀಡಬೇಕು. ಪ್ರಸ್ತುತ ಬಿಡುಗಡೆಯಾದ ಬೆಳೆ ವಿಮೆಯ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಮುರಿದುಕೊಳ್ಳಬಾರದು. 

ರಾಷ್ಟ್ರೀಯ ಬೆಳೆವಿಮೆ ಯೋಜನೆ ಬದಲಾಗಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿಗೆ ತರಬೇಕು ಹಾಗೂ ಅಣ್ಣಿಗೇರಿ ಹೋಬಳಿಗೆ ವಿಮೆಯ ವ್ಯಾಪ್ತಿಗೆ ಯಾವ ಬೆಳೆಗಳನ್ನು ಅಳವಡಿಸಬೇಕು ಎನ್ನುವುದಕ್ಕೆ ವಿಶೇಷ ತಜ್ಞರ ಸಮಿತಿ ರಚಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸದ್ದಾರೆ.

ಅತಿವೃಷ್ಟಿಯ ನಿರ್ವಹಣೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ತಾರತಮ್ಯ ನೀತಿ ಅನುಸರಿಸಲಾಗಿದೆ. ಇದನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕುಎ ಎಂದು ಆಗ್ರಹಿಸಿದ್ದಾರೆ.ಧರಣಿಯಲ್ಲಿ ಅಮೃತಪ್ಪ ಪಟ್ಟೇದ, ಅಮೃತಪ್ಪ ಗೂರಗೇರಿ, ಎಂ.ಎಂ.ಶಿಶ್ವಿನಹಳ್ಳಿ, ಕಲ್ಲಪ್ಪ ಸಮಾಜಿ, ಶಂಕ್ರಪ್ಪ ಶಿರಿಯಮ್ಮನವರ, ಶಂಕ್ರಪ್ಪ ಯಳವತ್ತಿ, ಚನ್ನಯ್ಯ ಬಂಗಾರಿಮಠ, ಮಲ್ಲಪ್ಪ ಬಿರಸಲ, ಮಲ್ಲಪ್ಪ ಯಮನೂರ, ಈಶ್ವರಪ್ಪ ಉಳ್ಳಾಗಡ್ಡಿ, ಹೊಳೆಯಪ್ಪ ಕೊಪ್ಪದ, ನಿಂಗಪ್ಪ ನಾವಳ್ಳಿ, ಬಸವರಾಜ ಪಟ್ಟೇದ, ಮಹಾದೇವ ಮತ್ತಿತರರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT