ADVERTISEMENT

`ಭಿನ್ನ ಸಾಮರ್ಥ್ಯ'ದ ಮಕ್ಕಳ ಪೋಷಕರಿಗೆ ವೈದ್ಯರಿಂದ ವಿಶೇಷ `ಪಾಠ'

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 5:18 IST
Last Updated 23 ಜೂನ್ 2013, 5:18 IST

ಹುಬ್ಬಳ್ಳಿ: ಅಲ್ಲಿ ಕೆಲವರ ಕೈಯಲ್ಲಿ, ಇನ್ನೂ ಹಲವರ ಕಂಕುಳದಲ್ಲಿ, ಇನ್ನೂ ಕೆಲವು ಮಕ್ಕಳು ನೆಲದಲ್ಲಿ ತಮಗರಿವಿಲ್ಲದಂತೆ ವರ್ತಿಸುತ್ತಿದ್ದರು. ನಿಯಂತ್ರಣ ವಿಲ್ಲದೆ ಅಡ್ಡಾಡುವ ಅಂಗಾಂಗಗಳು, ಎತ್ತಲೋ ದೃಷ್ಟಿನೆತ್ತ ಕಣ್ಣುಗಳು... ಹೀಗೆ `ಭಿನ್ನ' ಚಟುವಟಿಕೆ ಯಿಂದ ಆ `ವಿಶೇಷ ಸಾಮರ್ಥ್ಯ' ಮಕ್ಕಳು ಗಮನ ಸೆಳೆಯುತ್ತಿದ್ದರು...

ಅವರೆಲ್ಲರನ್ನೂ ಅಕ್ಕರೆಯಿಂದ ಎತ್ತಿಕೊಂಡು ಬಂದ ಪೋಷಕರು- ಪಾಲಕರಿಗೆ ಅವರವರ ಕರುಳುಬಳ್ಳಿಯ ಭವಿಷ್ಯದ ಕಡೆಗೆ ಚಿಂತೆ. ಮುಂದೇನು? ಎಂಬ ಯೋಚನೆ. ಅಂತಹ ಮಕ್ಕಳ ಸಮಸ್ಯೆ ಅರಿತು ಲಾಲನೆ- ಪಾಲನೆಯ `ಪಾಠ' ಹೇಳಿಕೊಡಲು ಬೆಂಗಳೂರಿನ ನಿಮ್ಹಾನ್ಸ್‌ನಿಂದ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ತಜ್ಞ ವೈದ್ಯರಿಬ್ಬರು ಅಲ್ಲಿದ್ದರು.

ಮೆದುಳು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಮಕ್ಕಳ ಪೋಷಕರು ಮತ್ತು ಪಾಲಕರಿಗಾಗಿ ನಗರದ ಗೋವಿಂದರಾಮ್ ವರ್ಮ ಚಾರಿಟಬಲ್ ಟ್ರಸ್ಟ್ ಮತ್ತು ಆನಂದ ನೋವು ಶಮನ ಮತ್ತು ಪುನರ್ವಸತಿ ಸಂಸ್ಥೆಯ ವತಿಯಿಂದ ಕೇಶ್ವಾಪುರದಲ್ಲಿರುವ ಎಸ್.ಟಿ. ಭಂಡಾರಿ ಸಭಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಕಾರ್ಯಾಗಾರದಲ್ಲಿ ಕಂಡ ದೃಶ್ಯವಿದು.

ಬುದ್ಧಿ ಮಾಂದ್ಯ ಮಕ್ಕಳನ್ನು ಎತ್ತಿಕೊಂಡು ಬಂದಿದ್ದ ಪೋಷಕರು- ಪಾಲಕರ ಮುಖದಲ್ಲಿ ಆ ತಜ್ಞ ವೈದ್ಯರಿಬ್ಬರು ನೀಡುವ ಸಲಹೆ ಕೇಳುವ, ಮಾರ್ಗದರ್ಶನ ಪಡೆಯುವ ಕುತೂಹಲವಿತ್ತು. ಸುಮಾರು 30ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳ ಜೊತೆ ಕಾರ್ಯಾಗಾರದಲ್ಲಿ ಭಾಗವಹಿಸಿದರು.

`ಸಾವಿರ ಮಕ್ಕಳ ಪೈಕಿ ಶೇಕಡಾ 2ರಿಂದ 3ರಷ್ಟು ಮಕ್ಕಳಲ್ಲಿ ಮೆದುಳು ಪಾರ್ಶ್ವವಾಯು ಕಾಣಿಸಿಕೊಳ್ಳುತ್ತದೆ. ಮಗುವಿಗೆ ಗರ್ಭದಲ್ಲಿ ಅಥವಾ ಹೆರಿಗೆ ಪೂರ್ವ ಅಥವಾ ನಂತರದ ಅವಧಿಯಲ್ಲಿ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಮಗು ಬೆಳೆಯುತ್ತಿದ್ದಂತೆ ಮೂರರಿಂದ ಐದು ವರ್ಷದ ಅವಧಿಯಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಇಲ್ಲದ ಈ ರೋಗಬಾಧಿತ ಮಕ್ಕಳ ಕುರಿತು ಪೋಷಕರು ವಿಶೇಷ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಇಂತಹ ಮಕ್ಕಳ ಜೊತೆ ಪೋಷಕರು ಹೇಗೆ ವರ್ತಿಸಬೇಕು, ಬೆಳವಣಿಗೆಯನ್ನು ಗಮನಿಸುತ್ತಲೇ ಆ ವಾತಾವರಣಕ್ಕೆ ಯಾವ ರೀತಿ ಹೊಂದಿಕೊಳ್ಳಬೇಕು, ಪ್ರೀತಿ, ವಿಶ್ವಾಸದಿಂದ ಬೆಳೆಸಬೇಕು, ವೈಜ್ಞಾನಿಕವಾಗಿ ಹೇಗೆ ನೋಡಿಕೊಳ್ಳಬೇಕು, ಸಮಾಜದಲ್ಲಿ ಇತರ ಮಕ್ಕಳ ಮಧ್ಯೆ ಈ ಮಗುವಿಗೂ ಗೌರವ ದೊರುಕುವಂತೆ ಯಾವ ರೀತಿಯಲ್ಲಿ? ಎಷ್ಟು ಸಮಯ ಮಾಡಬೇಕು ಎನ್ನುವುದು ಮುಖ್ಯ. ಈ ಬಗ್ಗೆ ಪೋಷಕರಲ್ಲಿ ವಿಶೇಷವಾದ ಅರಿವಿನ ಅಗತ್ಯವಿದೆ' ಎಂದು ನಿಮ್ಹಾನ್ಸ್‌ನ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ವೈದ್ಯೆ ಡಾ.ಬಿ. ಪಿ. ನಿರ್ಮಾಲಾ  ತಿಳಿಸಿದರು.

`ಮಕ್ಕಳು ಬುದ್ಧಿಮಾಂದ್ಯರಾಗಿದ್ದರೂ ಅವರಲ್ಲಿ ವಿಶೇಷವಾದ ಇನ್ನೇನೋ ಸಾಮರ್ಥ್ಯ ಇರುತ್ತದೆ. ಅದು ಸಂಗೀತ, ಚಿತ್ರಕಲೆ, ವಿಶೇಷ ಜ್ಞಾನಶಕ್ತಿ... ಹೀಗೆ ಬೇರೆಬೇರೆ ಇರಬಹುದು. ಅದನ್ನು ಗುರುತಿಸುವ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಷಕರು ಹೆಚ್ಚು ಜಾಗೃತರಾಗಬೇಕು. ಈ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕು. ಇಂತಹ ಮಕ್ಕಳ ಅಗತ್ಯಗಳಿಗೆ ಪೂರಕವಾಗಿ ಪೋಷಕರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದರಲ್ಲಿ ಆ ಮಕ್ಕಳ ಭವಿಷ್ಯ ಅಡಗಿರುತ್ತದೆ' ಎಂದರು.

`ಮೆದುಳು ಪಾರ್ಶ್ವವಾಯುವಿನಿಂದಾಗಿ ದೇಹದ ಯಾವುದಾದರೂ ಭಾಗದ ಚಟುವಟಿಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ರೋಗಬಾಧಿತ ನೂರು ಮಕ್ಕಳ ಪೈಕಿ ಶೇ 30ರಿಂದ 40 ಮಕ್ಕಳಲ್ಲಿ ಮಾತ್ರ ಬುದ್ದಿ ಮಾಂದ್ಯ ಕಂಡುಬರುತ್ತದೆ. ಉಳಿದ ಮಕ್ಕಳು ಇನ್ನೇನೋ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಔಷಧದಿಂದ ಗುಣಮುಖವಾಗುವ ರೋಗ ಅಲ್ಲದಿದ್ದರೂ ಮನೋವೈದ್ಯಕೀಯ ಸಮಾಜಕಾರ್ಯದಲ್ಲಿ ಪೋಷಕರ ಜೊತೆ ಆಪ್ತ ಸಮಾಲೋಚನೆಯ ಮೂಲಕ ಮಕ್ಕಳ ಬೆಳವಣಿಗೆಗೆ ಪೂರಕವಾದ ಸಲಹೆ ಸೂಚನೆಯ ಚಿಕಿತ್ಸೆ ಇದೆ' ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿಮ್ಹಾನ್‌ನಲ್ಲಿ ಅದೇ ವಿಭಾಗದಲ್ಲಿ ವೈದ್ಯರಾದ ಡಾ. ಕೃಷ್ಣಾ ರೆಡ್ಡಿ ತಿಳಿಸಿದರು.

ಕಾರ್ಯಾಗಾರವನ್ನು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಉದ್ಘಾಟಿಸಿದರು. ಮಕ್ಕಳ ತಜ್ಞ ರಾಜನ್ ದೇಶಪಾಂಡೆ, `ಪ್ರಜಾವಾಣಿ'ಯ ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಆನಂದ ವರ್ಮಾ, ಗೋವಿಂದರಾಮ್ ಚಾರಿಟಬಲ್ ಟ್ರಸ್‌ನ ಆಡಳಿತ ಟ್ರಸ್ಟಿ ಡಾ. ವಿನಯ್ ವರ್ಮಾ, ಟ್ರಸ್ಟಿ ಗಿರೀಶ ಉಪಾಧ್ಯಾಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.