ADVERTISEMENT

ಮಕ್ಕಳ ಕ್ರಿಯಾಶಕ್ತಿ ಜಾಗೃತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 6:20 IST
Last Updated 8 ಫೆಬ್ರುವರಿ 2013, 6:20 IST
ಡೆಕ್ಕನ್ ಹೆರಾಲ್ಡ್ ಹಬ್ಬದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ನೋಟ.
ಡೆಕ್ಕನ್ ಹೆರಾಲ್ಡ್ ಹಬ್ಬದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ನೋಟ.   

ಹುಬ್ಬಳ್ಳಿ: `ಮಕ್ಕಳಲ್ಲಿನ ಕ್ರಿಯಾಶಕ್ತಿ ಜಾಗೃತಿಗೊಳಿಸುವತ್ತ ಪೋಷಕರು ಗಮನ ಹರಿಸಬೇಕು' ಎಂದು ಮನಶಾಸ್ತ್ರಜ್ಞ ಪ್ರೊ.ಸಿ.ಸಿ. ದೀಕ್ಷಿತ್ ಸಲಹೆ ನೀಡಿದರು.

ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ಗುರುವಾರ `ಡೆಕ್ಕನ್ ಹೆರಾಲ್ಡ್ ಮಕ್ಕಳ ಹಬ್ಬ'ದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

`ಜ್ಞಾನ ಹಾಗೂ ಇಚ್ಛಾಶಕ್ತಿಯೊಂದಿಗೆ ಇಂದು ಕರ್ತೃ ಶಕ್ತಿಯೂ ಬಹಳ ಮುಖ್ಯವಾಗಿದೆ. ಮೊದಲಿನ ಎರಡು ಇದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಕ್ರಿಯಾಶಕ್ತಿ ಅಗತ್ಯವಿದೆ. ಆದ್ದರಿಂದ ಮಕ್ಕಳಲ್ಲಿ ಮೊದಲು ಕ್ರಿಯಾಶಕ್ತಿ ರೂಢಿಸುವುದು ಅಗತ್ಯವಿದೆ' ಎಂದರು.

`ಇಂದು ನಮ್ಮ ಮಿದುಳಿನ ಶೇ 15ರಷ್ಟು ಶಕ್ತಿ ಮಾತ್ರ ಬಳಸುತ್ತಿದ್ದೇವೆ. ಬದುಕಿನ ಯಾವುದೇ ಕ್ಷೇತ್ರದಲ್ಲಿ ಸೋಲು ಎದುರಾದರೆ ಅದರಿಂದ ಎದೆಗುಂದುವ ಅಗತ್ಯವಿಲ್ಲ. ಸೋಲಿಗೆ ಕಾರಣವಾದ ನಮ್ಮ ತಪ್ಪನ್ನು ಗುರುತಿಸಿ ಮುಂದಿನ ಬಾರಿ ಅದನ್ನು ಗೆಲುವಾಗಿ ಬದಲಾಯಿಸಲು ಪ್ರಯತ್ನಿಸುವುದು ಜಾಣತನ' ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಟಿವಿ ಬಂದ್ ಮಾಡು, ಓದಿಕೋ ಎಂದು ಸಣ್ಣ ವಿಷಯಗಳ ವಿಚಾರದಲ್ಲಿ ಪೋಷಕರಿಂದ ಹೇಳಿಸಿಕೊಳ್ಳದಂತೆ ಮಕ್ಕಳಿಗೆ ತಿಳಿಸಿದ ಅವರು, ಓದಿನಲ್ಲಿ ಏಕಾಗ್ರತೆಯ ಮೂಲಕ ಉನ್ನತವಾದುದನ್ನು ಸಾಧಿಸಿ ಎಂದು ತಿಳಿಸಿದರು.

ಡೆಕ್ಕನ್ ಹೆರಾಲ್ಡ್ ಪ್ರಸರಣ ವಿಭಾಗದ ವ್ಯವಸ್ಥಾಪಕ ಶ್ಯಾಮ್ ಕುಲಕರ್ಣಿ ಮಾತನಾಡಿ, ಮಕ್ಕಳಲ್ಲಿ ಓದು, ಬರಹ ಹಾಗೂ ಶಬ್ದಗಳ ಅರಿವು ಮೂಡಿಸಲು ಅಂತರರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿ 1955ರಲ್ಲಿ ಡೆಕ್ಕನ್ ಹೆರಾಲ್ಡ್ ಶಿಕ್ಷಣ ಪುರವಣಿ ಆರಂಭಿಸಲಾಯಿತು. ಕಳೆದೊಂದು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಈ ಪುರವಣಿಗೆ ವ್ಯಾಪಕ ಮನ್ನಣೆ ದೊರೆತಿದೆ ಎಂದು ಹೇಳಿದರು.
ರಾಜ್ಯದಲ್ಲಿ 65ರಿಂದ 70 ಸಾವಿರ ವಿದ್ಯಾರ್ಥಿಗಳು ಪ್ರತಿ ದಿನ ಡೆಕ್ಕನ್‌ಹೆರಾಲ್ಡ್ ಶಿಕ್ಷಣ ಪುರವಣಿಯ ಉಪಯೋಗ ಪಡೆಯುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ಎಂ. ನಾಗರಾಜ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಬಿ.ಎ. ರವಿ, ಜಾಹೀರಾತು ವಿಭಾಗದ ವ್ಯವಸ್ಥಾಪಕ ದಿವಾಕರ್ ಹಾಜರಿದ್ದರು.

ಬಹುಮಾನಿತರ ವಿವರ

ಕಿರಿಯರ ವಿಭಾಗ
ಚಿತ್ರಕಲೆ:
ಪ್ರಥಮ ಬಹುಮಾನ-ಅಭಿನಂದನ್ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ), ದ್ವಿತೀಯ-ಎಂ. ನಿನಾದ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ), ತೃತೀಯ-ಶಶಾಂಕ (ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ-2), ಸಮಾಧಾನ ಕಾರ ಬಹುಮಾನ-ಯು. ಐಶ್ವರ್ಯಾ (ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ) ಆದರ್ಶ (ಸೇಂಟ್ ಜೋಸೆಫ್ ಪ್ರೌಢಶಾಲೆ). ಹಾಡುಗಾರಿಕೆ: ಪ್ರಥಮ ಬಹುಮಾನ-ಆರ್.ಬಿ. ಜಾಹ್ನವಿ (ಧಾರವಾಡದ ಕೇಂದ್ರೀಯ ವಿದ್ಯಾಲಯ), ದ್ವಿತೀಯ-ವಿನೀತ್ ಎಸ್. ಲೋಕೂರು (ಸೇಂಟ್ ಜೋಸೆಫ್ ಹೈಸ್ಕೂಲ್), ತೃತೀಯ-ಐಶ್ವರ್ಯಾ ಪಟೇಲ್ (ಡಿ.ಕೆ. ಪಬ್ಲಿಕ್ ಶಾಲೆ). ಆಶುನಟನಾ ಸ್ಪರ್ಧೆ: ಪ್ರಥಮ ಸ್ಥಾನ- ಅಭಿಷೇಕ್ (ಧಾರವಾಡ ಕೇಂದ್ರೀಯ ವಿದ್ಯಾಲಯ), ದ್ವಿತೀಯ: ಪ್ರತಿಭಾ (ಧಾರವಾಡ ಕೇಂದ್ರೀಯ ವಿದ್ಯಾಲಯ), ತೃತೀಯ: ದಿಲೀಪ್ ಡಿಯೋರಾ (ಜೆ.ಕೆ. ಇಂಗ್ಲಿಷ್ ಮಾಧ್ಯಮ ಶಾಲೆ). ಸಮೂಹ ನೃತ್ಯ: ಪ್ರಥಮ ಸ್ಥಾನ-ಧಾರವಾಡದ ಕೇಂದ್ರೀಯ ವಿದ್ಯಾಲಯ, ದ್ವಿತೀಯ-ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ, ಮೂರನೇ ಸ್ಥಾನ-ಜೆ.ಕೆ. ಇಂಗ್ಲಿಷ್ ಮಾಧ್ಯಮ ಶಾಲೆ.

ಹಿರಿಯರ ವಿಭಾಗ
ಚಿತ್ರಕಲೆ:
ಪ್ರಥಮ ಬಹುಮಾನ-ಶ್ರದ್ಧಾ ಬೋಚಗೇರಿ (ಡಾ.ಜಿ.ವಿ. ಜೋಶಿ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆ), ದ್ವಿತೀಯ- ಪ್ರಿಯಾಂಕಾ (ಸೇಂಟ್ ಜೋಸೆಫ್ ಹೈಸ್ಕೂಲ್), ತೃತೀಯ-ಪಿ. ರಕ್ಷಿತ್ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ), ಸಮಾಧಾನಕರ ಬಹುಮಾನ-ಗೌರಿ ಪಾಟೀಲ (ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ), ಆಕಾಶ್ (ಜವಾಹರ್ ನವೋದಯ ಶಾಲೆ). ಹಾಡುಗಾರಿಕೆ: ಪ್ರಥಮ ಬಹುಮಾನ- ಚಿನ್ಮಯಿ ನಾಡಿಗೇರ (ಶಾಂತಿ ಸದನ ಪ್ರೌಢಶಾಲೆ), ದ್ವಿತೀಯ-ಎನ್. ಆದರ್ಶ (ಚಿನ್ಮಯ ವಿದ್ಯಾಲಯ), ತೃತೀಯ-ಸಂಜನಾ ಕುಲಕರ್ಣಿ (ಸೇಂಟ್ ಜೋಸೆಫ್ ಪ್ರೌಢಶಾಲೆ).

ಆಶುನಟನಾ ಸ್ಪರ್ಧೆ: ಪ್ರಥಮ ಸ್ಥಾನ- ಭೂಮಿಕಾ (ಶಾಂತಿ ಸದನ ಪ್ರೌಢಶಾಲೆ), ದ್ವಿತೀಯ-ನವ್ಯಾ ಪಟ್ನಾಯಕ್ (ಧಾರವಾಡ ಕೇಂದ್ರೀಯ ವಿದ್ಯಾಲಯ), ತೃತೀಯ-ಶಿವಕುಮಾರ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ). ಸಮೂಹ ನೃತ್ಯ: ಪ್ರಥಮ ಬಹುಮಾನ- ಸೇಂಟ್ ಜೋಸೆಫ್ ಹೈಸ್ಕೂಲ್, ದ್ವಿತೀಯ-ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ, ತೃತೀಯ-ಚಿನ್ಮಯ ವಿದ್ಯಾಲಯ.

ರಂಗು ತುಂಬಿದ ಮಕ್ಕಳ ಕಲರವ....
ಮುಂಜಾನೆಯಿಂದಲೇ ಸವಾಯಿ ಗಂಧರ್ವ ಹಾಲ್‌ನಲ್ಲಿ ಮಕ್ಕಳ ಕಲರವ `ಡೆಕ್ಕನ್ ಹೆರಾಲ್ಡ್' ಹಬ್ಬಕ್ಕೆ ರಂಗು ತುಂಬಿತ್ತು. ಅವಳಿನಗರದ 17 ಶಾಲೆಯ ಮಕ್ಕಳು ಹಾಡಿ, ಕುಣಿದು, ಚಿತ್ರ ಬಿಡಿಸಿ ಸಂಭ್ರಮಿಸಿದರು. ಸವಾಯಿ ಗಂಧರ್ವ ಹಾಲ್‌ನ ಮುಖ್ಯ ಸಭಾಂಗಣದಲ್ಲಿ ನೃತ್ಯ, ಹಾಡು ಕೇಳಿಸಿದರೆ ಮೊದಲ ಮಹಡಿಯಲ್ಲಿ ಚಿತ್ರಕಲೆಯ ಬಣ್ಣ ಹರಡಿತ್ತು. ಪ್ರಕೃತಿ, ಶಾಲೆ, ಮನೆ, ನದಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಘಟನೆ ಕುರಿತ ಭಾವನೆಗಳು ಚಿತ್ತಾರದಲ್ಲಿ ಒಡಮೂಡಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮದ ಎಲ್ಲಾ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ ಧಾರವಾಡದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರು. ಧಾರವಾಡ ಹಾಲು ಉತ್ಪಾದಕರ ಒಕ್ಕೂಟ ಮಕ್ಕಳಿಗೆ ಸುವಾಸಿತ ಹಾಲು ಪ್ರಾಯೋಜಿಸಿತ್ತು. ಚಿತ್ರಕಲಾ ಸ್ಪರ್ಧೆಗೆ ಕಲಾವಿದೆ ಸುಮಂಗಳಾ ಭಟ್, ಹಾಡುಗಾರಿಕೆಗೆ ಶ್ರೀನಿವಾಸ ಜೋಶಿ, ಆಶು ನಟನಾ ಸ್ಪರ್ಧೆಗೆ ವೀಣಾ ಅಠವಲೆ ಹಾಗೂ ಸಮೂಹ ನೃತ್ಯಕ್ಕೆ ರೋಹಿಣಿ ಆರ್. ಇಮಾರತಿ ತೀರ್ಪುಗಾರರಾಗಿದ್ದರು.

ಸ್ಪರ್ಧೆಯಲ್ಲಿ ಚಿನ್ಮಯ ಮಿಶನ್, ಡಿ.ಕೆ. ಪಬ್ಲಿಕ್ ಶಾಲೆ, ಡಾ.ಜಿ.ವಿ. ಜೋಶಿ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆ, ಜೆ.ಕೆ. ಇಂಗ್ಲಿಷ್ ಮಾಧ್ಯಮ ಶಾಲೆ, ಜವಾಹರ್ ನವೋದಯ ವಿದ್ಯಾಲಯ, ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ, ಧಾರವಾಡದ ಕೇಂದ್ರೀಯ ವಿದ್ಯಾಲಯ, ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ, ಶಾಂತಿ ಸದನ ಪ್ರೌಢಶಾಲೆ, ನಿರ್ಮಲಾ ಠಕ್ಕರ್ ಪ್ರೌಢಶಾಲೆ, ಸೇಂಟ್ ಅಂಡ್ರೆ ಇಂಗ್ಲಿಷ್ ಮಾಧ್ಯಮ ಶಾಲೆ, ಸೇಂಟ್ ಜೋಸೆಫ್ ಹೈಸ್ಕೂಲ್, ವಿ.ಎಸ್. ಪಿಳ್ಳೈ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT