ADVERTISEMENT

ಮಣ್ಣಿನ ಮಕ್ಕಳ ಕೈಹಿಡಿದ ಮಳೆ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 6:00 IST
Last Updated 11 ಸೆಪ್ಟೆಂಬರ್ 2011, 6:00 IST

ಧಾರವಾಡ: `ಮಣ್ಣಿನ ಮಕ್ಕಳಿ~ಗೂ ಮಳೆರಾಯನಿಗೂ ಯಾವಾಗಲೂ ಬಿಡಲಾರದಂತದ ನಂಟು. ಆ ನೆಂಟಸ್ತನದ ಪರಿಣಾಮವೋ, ಏನೋ ಕೃಷಿಮೇಳ ಆರಂಭವಾಗಿ ಎರಡೂ ದಿನಗಳಾದರೂ ರೈತರ ಹಬ್ಬಕ್ಕೆ ಮಳೆರಾಯನಿಂದ ಒಂದಿನಿತೂ ತೊಂದರೆಯಾಗಿಲ್ಲ.

ಕಳೆದ 15-20 ದಿನಗಳಿಂದ ದಿನವಿಡೀ ಸುರಿಯುತ್ತಾ ಬೆಂಬಿಡದಂತೆ ಕಾಡಿದ್ದ ಮಳೆ, ಕಳೆದ ಎರಡು ದಿನಗಳಿಂದ ಇದ್ದಕ್ಕಿದ್ದ ಹಾಗೆ ನಿಂತು ಬಿಟ್ಟಿದೆ. ಈ ಸಲದ ಮೇಳ ಹೇಗೋ, ಏನೋ ಎಂಬ ಭೀತಿಯಿಂದ ಮಳೆಯಲ್ಲೇ ತಯಾರಿ ನಡೆಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ತಂಡ ಮಳೆ ನೀಡಿದ ಸಹಕಾರದಿಂದ ಹರ್ಷಚಿತ್ತವಾಗಿದೆ.

ಮೇಳದ ಹಿಂದಿನ ದಿನವೂ ಮಳೆ ಸುರಿದದ್ದರಿಂದ ಮೊದಲ ದಿನವಾದ ಶುಕ್ರವಾರ ವಿಶ್ವವಿದ್ಯಾಲಯದ ಅಂಗಳ ಕಿಚಿ-ಕಿಚಿ ಅನ್ನುತ್ತಿತ್ತು. ಪ್ರಧಾನ ವೇದಿಕೆ ಕಡೆಗೆ ಓಡಿದ್ದ ಕೆಲವು ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದಿದ್ದವು. ಸಂಘಟಕರು ಜಲ್ಲಿಕಲ್ಲು ತಂದು ರಸ್ತೆಯಲ್ಲಿ ಸುರಿಯುವ ಮೂಲಕ ಅದನ್ನು ಮತ್ತೆ ವಾಹನಗಳ ಓಡಾಟಕ್ಕೆ ಅಣಿಗೊಳಿಸಿದ್ದರು.

ಶುಕ್ರವಾರ ಹತ್ತಿರಕ್ಕೂ ಸುಳಿಯದ ಮಳೆರಾಯ ಮೋಡಗಳನ್ನೂ ದೂರಕ್ಕೆ ಹೊತ್ತೊಯ್ದ ಪರಿಣಾಮ ಪ್ರಖರ ಬಿಸಿಲನ್ನು ವಿವಿ ಅಂಗಳ ಕಂಡಿತ್ತು. ಒಂದೆಡೆ ನೆಲ ಆರಿದರೆ, ಇನ್ನೊಂದೆಡೆ ಮೇಳಕ್ಕೆ ಬಂದವರು `ಉಷ್ಯಪ್ಪ ಇದೇನು ಬಿಸಿಲು~ ಎಂಬ ರಾಗ ತೆಗೆದಿದ್ದರು. ಬಿಸಿಲಿನ ಪ್ರಖರತೆ ಅಷ್ಟೊಂದು ಜೋರಾಗಿತ್ತು.

ಶನಿವಾರವೂ ಅದೇ ವಾತಾವರಣ ಮುಂದುವರಿಯಿತು. ಮಳೆ ಬಾರದ್ದರಿಂದ ಸಂಘಟಕರು, ಉದ್ದಿಮೆದಾರರು, ವ್ಯಾಪಾರಿಗಳು ಹಾಗೂ ರೈತರು ಸೇರಿದಂತೆ ಎಲ್ಲರೂ ಖುಷಿಯಾಗಿದ್ದರು. ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಪೇರಲ ಹಣ್ಣುಗಳಂತೂ ಸಿಕ್ಕಾಪಟ್ಟೆ ಮಾರಾಟವಾದವು. ಮಳಿಗೆಗಳ ಮುಂದೆಯೇ ಪೇರಲ ಹಣ್ಣಿನ ತೋಟಗಳು ಇರುವುದರಿಂದ ಹಣ್ಣು ಮಾರುವವರು ರಸ್ತೆ ಬದಿ ಬುಟ್ಟಿ ಇಟ್ಟುಕೊಂಡು ಮಾರುತ್ತಿದ್ದರು.

ಜಾನುವಾರು ಮೇಳ, ಫಲ-ಪುಷ್ಪ ಪ್ರದರ್ಶನ, ಮಳಿಗೆಗಳ ದರ್ಶನದಲ್ಲಿ ತುಂಬಾ ಬ್ಯುಸಿಯಾಗಿದ್ದ ರೈತರು, ಭಾಷಣ ಆಲಿಸಲು ಅಷ್ಟಾಗಿ ಒಲವು ತೋರಲಿಲ್ಲ. ಮಧ್ಯಾಹ್ನ ಅನುಭವಿ ರೈತರ ಮಾತು ಕೇಳಲು ಮಾತ್ರ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.

ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ರೈತರು ಮೊದಲು ಹೋಗುತ್ತಿದ್ದುದು ಬೀಜ ಮೇಳಕ್ಕೆ. ಅಲ್ಲಿ ಬೀಜಗಳನ್ನು ಖರೀದಿಸಿಕೊಂಡು, ತಲೆಯ ಮೇಲೆ ಹೊತ್ತು ಮೇಳದಲ್ಲಿ ಸುತ್ತಾಡಲು ಆಗಮಿಸುತ್ತಿದ್ದರು. ಕ್ಷೇತ್ರೋತ್ಸವಕ್ಕೂ ಆಸಕ್ತ ರೈತರು ಬರುತ್ತಿದ್ದರು.

`ತೂಕ ತುಂಬಾ ಕಡಿಮೆ ಬರುತ್ತದೆ. ನೀವು ಹೇಳಿದಂತಿಲ್ಲ~ ಎಂದು ಕೆಲ ರೈತರು ಕಂಪೆನಿಗಳ ಉದ್ಯೋಗಿಗಳಿಗೆ ತರಾಟೆ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ತಮ್ಮ ಬೆಳೆಗೆ ಇಂತಹ ರೋಗ ಬಂದಿದೆ ಏನು ಮಾಡಬೇಕು ಎಂದು ಅಲ್ಲಿದ್ದ ತಜ್ಞರಿಂದ ಮಾಹಿತಿ ಪಡೆಯುತ್ತಿದ್ದರು.

ತಮಗಿಂತಲೂ ಎತ್ತರ ಬೆಳೆದ ಜೋಳದ ಬೆಳೆಯನ್ನು ಕಂಡು ಕುತೂಹಲದಿಂದ ವಿವರ ಕೇಳುತ್ತಿದ್ದರು. ಪ್ರತಿ ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂಬುದು ಎಲ್ಲ ಕಡೆ ರೈತರು ಮುಂದಿಡುತ್ತಿದ್ದ ಸಾಮಾನ್ಯ ಪ್ರಶ್ನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.