ADVERTISEMENT

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 10:21 IST
Last Updated 29 ಏಪ್ರಿಲ್ 2018, 10:21 IST

ಧಾರವಾಡ: ‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರುವ ವಿ.ಎಸ್.ಟಿ, ಎಸ್.ಎಸ್.ಟಿ ಹಾಗೂ ಎಫ್.ಎಸ್.ಟಿ ತಂಡಗಳು ಚುರುಕಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಚುನಾವಣಾ ವೀಕ್ಷಕ ರಾಜೇಶ ಬಹುಗುಣ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಗೆ ಎಲ್ಲಾ ಕ್ಷೇತ್ರಗಳ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ವಿಡಿಯೊ ಕಣ್ಗಾವಲು ತಂಡ ಪ್ರತಿನಿತ್ಯ ನೀಡುವ ಎಲ್ಲ ಅಭ್ಯರ್ಥಿಗಳ ಚಿತ್ರೀಕರಣಗಳನ್ನು ವಿವಿಟಿ ತಂಡವು ಸೂಕ್ಷ್ಮವಾಗಿ ವೀಕ್ಷಿಸಿ ಸಕಾಲಕ್ಕೆ ವರದಿ ಸಲ್ಲಿಸಬೇಕು. ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆ ಕುರಿತು ಎಚ್ಚರವಹಿಸಬೇಕು’ ಎಂದರು. ‘ವೆಬ್ ಕಾಸ್ಟಿಂಗ್ ಮಾಡಲು ಸಾಧ್ಯವಿಲ್ಲದ ಮತಗಟ್ಟೆಗಳಿಗೆ ಮೈಕ್ರೊ ಅಬ್ಸರ್ವರ್‌ಗಳನ್ನು ನೇಮಿಸಬೇಕು. ಮತಗಟ್ಟೆ ಸಿಬ್ಬಂದಿ ಹಾಗೂ ಮತದಾರರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ವೀಕ್ಷಕ ಭಾನುಪ್ರಕಾಶ ಏಟೂರು ಮಾತನಾಡಿ, ‘ಮತದಾರರ ಗುರುತಿನ ಚೀಟಿಗಳ ವಿತರಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಮತದಾರರ ಮನೆ ಬಾಗಿಲಿಗೆ  ಭಾವಚಿತ್ರವುಳ್ಳ ಚೀಟಿ ಹಾಗೂ ಮತದಾರರ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಬೇಕು. ಮತಗಟ್ಟೆಗೆ ನೇಮಕಗೊಂಡಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಂಚಿತವಾಗಿ ಸೂಕ್ತ ತರಬೇತಿ ಮತ್ತು ಪರಸ್ಪರ ಪರಿಚಯ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಪೊಲೀಸ್ ವೀಕ್ಷಕ ಸಚಿನ್ ಪಾಟೀಲ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸ್ನೇಹಲ್ ರಾಯಮಾನೆ, ಮತದಾರರ ಜಾಗೃತಿಗಾಗಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು.

ಸಾಮಾನ್ಯ ವೀಕ್ಷಕರಾದ ಡಾ. ಸಂಜಯ್ ಸಿನ್ಹಾ, ಕೆ.ಆರ್. ಮಜುಂದಾರ್, ಪ್ರಕಾಶ ಚಂದ್ ಪವನ್, ಸಂಜಯ್ ಗುಪ್ತಾ, ಖರ್ಚು ವೆಚ್ಚಗಳ ವೀಕ್ಷಕರಾದ ಆನಂದಕುಮಾರ್, ಪಿ.ಆರ್. ಉನ್ನಿಕೃಷ್ಣನ್, ಆರ್.ಆರ್.ಎನ್. ಶುಕ್ಲಾ, ಕೆ.ಎ. ಜ್ಯೋತೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.