ಹುಬ್ಬಳ್ಳಿ: ಕೋಣೆಗಳ ತುಂಬ ಮಲ, ಸೇದಿ ಎಸೆದ ಸಿಗರೇಟ್ ತುಂಡುಗಳು, ಯಾವುದೋ ವಸ್ತುವನ್ನು ಸುಟ್ಟ ಕುರುಹು, ಮುರಿದ, ಕೆಲವು ಕಡೆ ಬೆಂಕಿಗಾಹುತಿಯಾದ ಕಿಟಕಿ-ಬಾಗಿಲುಗಳು....
ನಗರ ಹೊರವಲಯದ ಯಾವುದೋ ಪಾಳುಬಿದ್ದ ಕಟ್ಟಡದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಚಿತ್ರಣವಿರಬಹುದು ಇದು ಎಂದುಕೊಂಡರೆ ತಪ್ಪು. ಇದು ನಗರದ ಸರ್ಕಾರಿ ಶಾಲೆಯೊಂದರ ಚಿತ್ರ. ಬರೀ ಶಾಲೆಯಲ್ಲ, ಇದು ಮಾದರಿ ಶಾಲೆ, ಶತಮಾನ ಕಂಡ ಶಾಲೆ.
ಇದು ಉಣಕಲ್‌ನ ಶ್ರೀ ರಾ.ಚ. ಚಿಕ್ಕಮಠ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
ವರ್ಷಗಳಿಂದ ಇಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಪುಂಡರ, ಸಮಾಜಘಾತುಕರ ಕಾಟದ ವಿರುದ್ಧ ಸೆಣಸಾಡಿ ಶಿಕ್ಷಕ ವೃಂದ ಅಕ್ಷರಶಃ ಸೋತಿದೆ.
ಮಕ್ಕಳು ಕೂಡ ಹೊಲಸು ಗುಡಿಸಿ ಹೊರಹಾಕಿ, ದುರ್ವಾಸನೆ ನಡುವೆಯೇ ಪಾಠ ಕೇಳಿ ಸುಸ್ತಾಗಿದ್ದಾರೆ. ಕೆಲವು ದಿಟ್ಟ ಕ್ರಮಗಳಿಂದ ಕೆಲಕಾಲ ಪುಂಡಾಟ ನಿಂತ ಕಾರಣ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ ಶಿಕ್ಷಕರು ಬುಧವಾರ ಮತ್ತೆ ಚಿಂತೆಗೀಡಾಗಿದ್ದಾರೆ. ಕಾರಣ ಈ ಬಾರಿ ಪುಂಡರು ಇನ್ನಷ್ಟು `ಶಕ್ತಿಶಾಲಿ~ಗಳಾಗಿ ಮತ್ತೆ ಕಣಕ್ಕಿಳಿದಿದ್ದು ಅದರ ಕುರುಹುಗಳು ಶಾಲೆಯಲ್ಲಿ ಕಂಡಿವೆ.
ಶಾಲೆಯಲ್ಲಿ ನಡೆಯುವ ಕಾಟದ ಬಗ್ಗೆ ಶಿಕ್ಷಕರ ವಿವರಣೆ ಕೇಳಿದರೆ ಯಾವುದೋ ಭೂತಬಂಗಲೆಗೆ ಸಂಬಂಧಿಸಿದ ಕಲ್ಪಿತ ಕಥೆಯನ್ನು ಕೇಳಿದಂತಾಗುತ್ತದೆ. ಆದರೆ ತರಗತಿ ಕೊಠಡಿಗಳನ್ನು ಪ್ರತ್ಯಕ್ಷವಾಗಿ ಕಂಡಾಗ ಬೆರಗಾಗದೇ ಇರಲು ಸಾಧ್ಯವಿಲ್ಲ.
ಸ್ವಲ್ಪ ಹಿಂತಿರುಗಿ ನೋಡಿದರೆ...: 142 ವರ್ಷಗಳ ಹಿಂದೆ ಸ್ಥಾಪನೆಯಾದ ಶಾಲೆ ಇದು. ಹುಬ್ಬಳ್ಳಿ ತಾಲ್ಲೂಕಿನಲ್ಲೇ ಎಲ್ಲ ವಿಭಾಗಗಳಲ್ಲಿ ಹೆಸರು ಮಾಡಿದ್ದ ಶಾಲೆಗೆ ಇದೇ ಕಾರಣದಿಂದ ಮಾದರಿ ಶಾಲೆ ಎಂಬ ಹೆಸರು ಬಂದಿದೆ.
ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಜನಸಮುದಾಯ ವಾಸಿಸುವ ಪ್ರದೇಶದಲ್ಲಿರುವ, ಸುಂದರ ಪರಿಸರ ಹೊಂದಿರುವ ಶಾಲೆಯಲ್ಲಿ ಈ ಭಾಗದ ಮಹತ್ವದ ಶೈಕ್ಷಣಿಕ ಸಭೆ-ಸಮಾರಂಭಗಳು ನಡೆಯುತ್ತಿದ್ದವು. ಇಂಥ ಶಾಲೆಗೆ ದಿಢೀರ್ ನುಗ್ಗಿದರು ಅವರು...
ಶಾಲೆಯ ಶಿಕ್ಷಕರು ಹೇಳುವಂತೆ ಇಲ್ಲಿ ಪ್ರತಿ ರಾತ್ರಿ ಮೋಜು-ಮಜಾ-ಮಸ್ತಿ ನಡೆಯುತ್ತದೆ. ಹೀಗಾಗಿ ಕಿಟಕಿ ಬಾಗಿಲುಗಳಿಗೆ ಬೀಗ ಹಾಕಲು ನಡೆಸಿದ ಯಾವುದೇ ಪ್ರಯತ್ನ ಯಶಸ್ಸು ಕಾಣಲಿಲ್ಲ. ಬೀಗ ಒಡೆದು ಒಳನುಗ್ಗುವ ಸಮಾಜಘಾತುಕರನ್ನು ನಿಯಂತ್ರಿಸುವುದಕ್ಕಾಗಿ ಬೀಗ ಖರೀದಿಸಿ ಸುಸ್ತಾದ ಮುಖ್ಯ ಶಿಕ್ಷಕಿ ಕೊನೆಗೆ ಆ ಯತ್ನವನ್ನು ಕೈಬಿಟ್ಟರು.
ಈಚೆಗೆ ತಾರಸಿ ಮೇಲೇರಿ ದಂಧೆ ನಡೆಸುವುದು ತಿಳಿದ ನಂತರ ಯಾರಿಗೂ ಒಡೆಯಲಾಗದ ಗ್ರಿಲ್ಸ್ ಹಾಕಿ ದಾರಿಯನ್ನು ಮುಚ್ಚಲಾಯಿತು. ಆದರೆ ಮಂಗಳವಾರ ರಾತ್ರಿ ಹೆಂಚು ತೆಗೆದು ಒಳನುಗ್ಗಿದ ದುರುಳರು ಶಾಲೆಯ ದಾಖಲಾತಿಗಳನ್ನು ಕಿತ್ತೆಸೆದು ಹಾಳುಗೆಡವಿದ್ದಾರೆ, ಅನೇಕ ಕಡೆಗಳಲ್ಲಿ ಸುಮ್ಮನೇ ಬೆಂಕಿ ಹಚ್ಚಿದ್ದಾರೆ, ತರಗತಿ ಕೊಠಡಿಗಳಲ್ಲಿ `ಹೊಲಸು~ ಮಾಡಿ ಹೋಗಿದ್ದಾರೆ.
ಸಮಸ್ಯೆಯ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ರತ್ನಮಾಲಾ ಶ. ಬೇಲಿ, `ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಬಂಧಪಟ್ಟವರನ್ನು ಬಾರಿ ಬಾರಿ ಕಂಡು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿದ್ಯಾದೇವತೆ ವಾಸಿಸುವ ಜಾಗವನ್ನು ಈ ರೀತಿ ಹಾಳು ಮಾಡುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆಗೆ ಉತ್ತರ ಕಾಣದೆ ಕಂಗಾಲಾಗಿದ್ದೇವೆ~ ಎಂದು ಹೇಳಿದರು.
ಬಡ ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿರುವವರನ್ನು ಪತ್ತೆಹಚ್ಚಿ ಶಿಕ್ಷೆ ನೀಡಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಗ್ರಾಮಸ್ಥರಾದ ಶಂಕರ ಮಲಕಣ್ಣವರ, ಚನ್ನಪ ಡಂಬಳ, ಬಿದರಿಕೊಪ್ಪ, ಕಡಕೊಳ ಹಾಗೂ ಚನ್ನು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.