ADVERTISEMENT

ಯಾರಿಗೆ ಹೊಡೆಯಲಿದೆ ಗೆಲುವಿನ ಲಾಟರಿ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:50 IST
Last Updated 4 ಜನವರಿ 2011, 10:50 IST

ಧಾರವಾಡ/ಹುಬ್ಬಳ್ಳಿ: “ಜಿಲ್ಲೆಯ 22 ಜಿಲ್ಲಾ ಪಂಚಾಯಿತಿ ಹಾಗೂ 75 ತಾಲ್ಲೂಕು ಪಂಚಾಯಿತಿ ಸ್ಥಾನಗಳ ಮತ ಎಣಿಕೆ ಕಾರ್ಯ ಮಂಗಳವಾರ (ಜ.4) ಬೆಳಿಗ್ಗೆ 8ರಿಂದ ಆರಂಭವಾಗಲಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.

ಧಾರವಾಡ ತಾಲ್ಲೂಕಿನ ಮತ ಎಣಿಕೆ ಕೇಂದ್ರವಾದ ಸೋಮೇಶ್ವರದ ಕೇಂದ್ರೀಯ ವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಮೂರು ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಮತ ಎಣಿಕೆ ಏಕಕಾಲಕ್ಕೆ ನಡೆಯಲಿದೆ ಎಂದರು.

ಜಿ.ಪಂ.ನ 22 ಕ್ಷೇತ್ರಗಳಿಗೆ 66 ಟೇಬಲ್‌ಗಳು ಹಾಗೂ ತಾ.ಪಂ.ನ 75 ಕ್ಷೇತ್ರಗಳಿಗೆ 75 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯುವುದು. ಧಾರವಾಡದಲ್ಲಿ 18, ಹುಬ್ಬಳ್ಳಿ, ಕಲಘಟಗಿ, ನವಲಗುಂದ ಹಾಗೂ ಕುಂದಗೋಳ ಕೇಂದ್ರಗಳಲ್ಲಿ ತಲಾ 12 ಟೇಬಲ್‌ಗಳಲ್ಲಿ ಜಿ.ಪಂ. ಮತ ಎಣಿಕೆ ನಡೆಯುವುದು. ಮತ ಎಣಿಕೆ ಕಾರ್ಯಕ್ಕೆ 300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದ್ದರಿಂದ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಆಯಾ ತಾಲ್ಲೂಕುಗಳ ಚುನಾವಣಾಧಿಕಾರಿಗಳು ಮತ ಎಣಿಕೆ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವರು. ಎಣಿಕೆ ಕೇಂದ್ರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಹಾಗೂ ಅವರ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳು ಎಣಿಕೆ ಕೇಂದ್ರಕ್ಕೆ ಬೆಳಿಗ್ಗೆ 7ಕ್ಕೆ ಆಗಮಿಸಬೇಕು. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳಿಗೆ ಹಾಗೂ ಪ್ರತಿನಿಧಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದು ಜೈನ್ ತಿಳಿಸಿದರು.

144 ಕಲಂ ಅನ್ವಯ ಮತ ಎಣಿಕೆ ಕೇಂದ್ರದ ಸುತ್ತಲೂ ಹಾಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಯಾವುದೇ ಮೆರವಣಿಗೆ, ಪಟಾಕಿ ಸಿಡಿಸುವುದಕ್ಕೆ ಅವಕಾಶವಿಲ್ಲ. ಮದ್ಯಪಾನ, ಮಾರಾಟ ನಿಷೇಧಿಸಲಾಗಿದೆ ಎಂದರು. ಹುಬ್ಬಳ್ಳಿ ತಾಲ್ಲೂಕಿನ ಮತ ಎಣಿಕೆ ಲ್ಯಾಮಿಂಗ್ಟನ್ ಶಾಲೆ, ಕಲಘಟಗಿಯ ಸೇಂಟ್ ಝೇವಿಯರ್ ಶಾಲೆ, ನವಲಗುಂದದ ಶಂಕರ ಕಲಾ ಹಾಗೂ ವಾಣಿಜ್ಯ ಕಾಲೇಜು ಮತ್ತು ಕುಂದಗೋಳದ ಹರಭಟ್ಟ ಕಾಲೇಜಿನಲ್ಲಿ ನಡೆಯಲಿದೆ.

ರಜೆ: ಧಾರವಾಡದಲ್ಲಿ ಮತ ಎಣಿಕೆ ನಡೆಯುವ ಕೇಂದ್ರೀಯ ವಿದ್ಯಾಲಯಕ್ಕೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಉಪವಿಭಾಗಾಧಿಕಾರಿ ಶಿವಾನಂದ ಕಾಪಶಿ, ತಹಸೀಲ್ದಾರ ರವೀಂದ್ರ ಕರಲಿಂಗಣ್ಣವರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರುದ್ರಸ್ವಾಮಿ ಹಾಜರಿದ್ದರು.

ಹುಬ್ಬಳ್ಳಿ ವರದಿ: ‘ತಾಲ್ಲೂಕಿನ ಜಿ.ಪಂ ಹಾಗೂ ತಾ.ಪಂ. ಮತಕ್ಷೇತ್ರಗಳ ಚುನಾವಣೆಯ ಮತ ಎಣಿಕೆಯ ಕಾರ್ಯಕ್ಕಾಗಿ ನಗರದ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಸಕಲ ಸಿದ್ಧತೆಯಾಗಿದೆ’ ಎಂದು ತಹಸೀಲ್ದಾರ ಎಸ್.ಎಸ್. ಬಿರಾದಾರ ತಿಳಿಸಿದರು.

‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬ್ಯಾಹಟ್ಟಿ, ಕೋಳಿವಾಡ, ಅದರಗುಂಚಿ ಹಾಗೂ ಬಿ. ಅರಳಿಕಟ್ಟಿ ಈ ನಾಲ್ಕು ಜಿ.ಪಂ. ಕ್ಷೇತ್ರಗಳ ಮತ ಎಣಿಕೆ ಲ್ಯಾಮಿಂಗ್ಟನ್ ಬಾಲಕರ ಪ್ರೌಢಶಾಲೆಯ ಡ್ರಾಯಿಂಗ್ ಹಾಲ್‌ನಲ್ಲಿ ನಡೆಯಲಿದೆ. ಪ್ರತಿ ಮತಕ್ಷೇತ್ರಕ್ಕೆ ಮೂರರಂತೆ ನಾಲ್ಕು ಕ್ಷೇತ್ರಗಳಿಗಾಗಿ ಒಟ್ಟು 12 ಟೇಬಲ್‌ಗಳನ್ನು ಎಣಿಕೆಗಾಗಿ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬ್ಯಾಹಟ್ಟಿ, ಹೆಬಸೂರ, ಇಂಗಳಹಳ್ಳಿ, ಕುಸುಗಲ್, ಸುಳ್ಳ, ಮಂಟೂರ, ಕೋಳಿವಾಡ, ರಾಯನಾಳ, ಅಂಚಟಗೇರಿ, ಬೆಳಗಲಿ, ನೂಲ್ವಿ,  ಅದರಗುಂಚಿ, ಬಿ. ಅರಳಿಕಟ್ಟಿ ಒಟ್ಟು 13 ತಾ.ಪಂ. ಕ್ಷೇತ್ರಗಳ ಮತ ಎಣಿಕೆ ಲ್ಯಾಮಿಂಗ್ಟನ್ ಬಾಲಕಿಯರ ಪ್ರೌಢಶಾಲೆಯ ಡ್ರಾಯಿಂಗ್ ಹಾಲ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಪ್ರತಿ ಮತಕ್ಷೇತ್ರಕ್ಕೆ ಒಂದರಂತೆ ಒಟ್ಟು 13 ಟೇಬಲ್‌ಗಳನ್ನು ಎಣಿಕೆಗಾಗಿ  ಅಲ್ಲಿ ವ್ಯವಸ್ಥೆ ಮಾಡಲಾಗಿದೆ. 

ಈ ಮತ ಎಣಿಕೆ ನಿರ್ವಹಣೆಗಾಗಿ 25 ಎಣಿಕೆ ಮೇಲ್ವಿಚಾರಕರು, 25 ಎಣಿಕೆ ಸಹಾಯಕರು ಮತ್ತು 25 ವಿದ್ಯುನ್ಮಾನ ಮತಯಂತ್ರ ಸಹಾಯಕರನ್ನು ನೇಮಿಸಲಾಗಿದೆ. ಒಟ್ಟಾರೆ ಮತ ಎಣಿಕೆ ಪ್ರಕ್ರಿಯೆಗೆ 100 ಸಿಬ್ಬಂದಿಯನ್ನು ತೊಡಗಿಸಲಾಗಿದೆ. ಜಿ.ಪಂ.ನ ಪ್ರತಿ ಮತ ಕ್ಷೇತ್ರಕ್ಕೆ 8ರಿಂದ 9 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದ್ದು, ತಾ.ಪಂ.ನ  ಮತ ಕ್ಷೇತ್ರಗಳಲ್ಲಿ ಕನಿಷ್ಠ 5ರಿಂದ ಗರಿಷ್ಠ 10 ಸುತ್ತುಗಳವರೆಗೆ ಮತ ಎಣಿಕೆ ನಡೆಯಲಿದೆ. ಎಲ್ಲಾ ಮತಕ್ಷೇತ್ರಗಳ ಎಣಿಕೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಎಲ್ಲಾ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ’ ಎಂದು ಅವರು ವಿವರಿಸಿದರು. ‘ಆಯಾಯ ಕ್ಷೇತ್ರದ ಫಲಿತಾಂಶವನ್ನು ತಕ್ಷಣವೇ ಆನ್‌ಲೈನ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಲಾಗುವುದು’ ಎಂದು  ಅವರು ಹೇಳಿದರು.

ಪರಿಶೀಲನೆ: ಜಿ.ಪಂ. ಮತಕ್ಷೇತ್ರಗಳ ಚುನಾವಣಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸಿಪಿ ಎನ್.ಎಸ್. ಪಾಟೀಲ   ಮತ ಎಣಿಕೆ ಕೇಂದ್ರದ ವ್ಯವಸ್ಥೆಯನ್ನು ಸೋಮವಾರ ಪರಿಶೀಲಿಸಿದರು. 

ಎಣಿಕೆಯ ಕೇಂದ್ರದ ಬಳಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮತ ಎಣಿಕೆಯ ಕೇಂದ್ರದೊಳಗೆ ಮೊಬೈಲ್, ತಂಬಾಕು, ಎಲೆ ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಯ್ಯುವುದನ್ನು  ನಿಷೇಧಿಸಲಾಗಿದೆ. ಈಗಾಗಲೇ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಎಣಿಕೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಏಜೆಂಟರ ನೇಮಕ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ’ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.