ADVERTISEMENT

ವಾಗ್ದಾನಕ್ಕೆ ಸೀಮಿತವಾದ 24x7 ನೀರು ಯೋಜನೆ

ಅವಳಿನಗರದಲ್ಲಿ ಜನಸಂಖ್ಯಾಧಾರಿತ ನೀರು ಪೂರೈಕೆಗೆ ಸಲಹೆ: ಪಾಲಿಕೆಯ ಧಾರವಾಡ ಸದಸ್ಯರ ವಿರೋಧ

ಗುರು ಪಿ.ಎಸ್‌
Published 14 ಮಾರ್ಚ್ 2018, 9:42 IST
Last Updated 14 ಮಾರ್ಚ್ 2018, 9:42 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಹುಬ್ಬಳ್ಳಿ: ಅವಳಿ ನಗರದ ನೀರಿನ ಬವಣೆ ನೀಗಿಸಲು 24X7 ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹಲವು ವರ್ಷಗಳಿಂದ ಪ್ರಯತ್ನ ನಡೆದಿದೆ. ಆದರೆ, ನೀರಿನ ಕೊರತೆ ಯೋಜನೆಯ ಅನುಷ್ಠಾನಕ್ಕೆ ಅಡ್ಡಗಾಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, 24 ಗಂಟೆ ಹೋಗಲಿ, ಅಗತ್ಯವಿರುವಷ್ಟಾದರೂ ನೀರು ಕೊಡಿ ಸಾಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

‘ನಿಮ್ಮ ಮನೆಗಳಿಗೆ ದಿನದ 24 ಗಂಟೆಯೂ ನೀರು ಪೂರೈಸಲಾಗುತ್ತದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಈ ಯೋಜನೆಗೆ ಈಗಾಗಲೇ ನೂರಾರು ಕೋಟಿ ಕೂಡ ಬಿಡುಗಡೆಯಾಗಿದೆ. ಆದರೆ, ವಾರವಾದರೂ ನೀರು ಬರುತ್ತಿಲ್ಲ. 24 ಗಂಟೆ ಬೇಡ, ಮೂರು ದಿನಕ್ಕೆ ಒಮ್ಮೆಯಾದರೂ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಸುವಂತಹ ಕ್ರಮ ತೆಗೆದುಕೊಳ್ಳಲಿ ಸಾಕು’ ಎಂದು ಹಳೇಹುಬ್ಬಳ್ಳಿ ಅರವಿಂದನಗರ ನಿವಾಸಿ ಬಸವರಾಜ ದಿಡ್ಡಿಮನಿ ಒತ್ತಾಯಿಸುತ್ತಾರೆ.

ಜನಸಂಖ್ಯೆಗನುಗುಣವಾಗಿ ನೀರು ಸಿಗಲಿ: ‘ಹುಬ್ಬಳ್ಳಿ–ಧಾರವಾಡಕ್ಕೆ ಸದ್ಯ ಸಮಪ್ರಮಾಣದ ನೀರು ಪೂರೈಸಲಾಗುತ್ತಿದೆ. ಧಾರವಾಡದಲ್ಲಿ ಅಂದಾಜು 3ಲಕ್ಷ ಜನಸಂಖ್ಯೆಯಿದ್ದರೆ, ಹುಬ್ಬಳ್ಳಿಯಲ್ಲಿ 7ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ನೀರಿನ ಕೊರತೆ ಇರುವ ಸಂದರ್ಭದಲ್ಲಿ ಜನಸಂಖ್ಯೆಗನುಗುಣವಾಗಿ ನೀರು ಪೂರೈಕೆಗೆ ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ’ ಎಂದು ಪಾಲಿಕೆಯ ವಿರೋಧ
ಪಕ್ಷದ ನಾಯಕ ಗಣೇಶ ಟಗರಗುಂಟಿ ಹೇಳುತ್ತಾರೆ

ADVERTISEMENT

ಕೆಲಸ ನಡೆಯುತ್ತಿಲ್ಲ: ಧಾರವಾಡದ ನಾಲ್ಕು ಹಾಗೂ ಹುಬ್ಬಳ್ಳಿಯ ನಾಲ್ಕು ವಾರ್ಡ್‌ಗಳಲ್ಲಿ 24X7 ನೀರು ಪೂರೈಸಲಾಗುತ್ತಿದೆ. ಉಳಿದ ವಾರ್ಡ್‌ಗಳಿಗೂ ಈ ಯೋಜನೆ ಜಾರಿಗೊಳಿಸಲು ₹763 ಕೋಟಿ ಯೋಜನೆ ರೂಪಿಸಲಾಗಿದೆ. ವಿಶ್ವಬ್ಯಾಂಕ್‌ನಿಂದ ₹550 ಕೋಟಿ ಹಾಗೂ ಮಹಾನಗರ ಪಾಲಿಕೆಯಿಂದ ₹213 ಕೋಟಿ ಬಿಡುಗಡೆ ಮಾಡಲಾಗಿದೆ.

‘ನೀರಿನ ಕೊರತೆ ಕಾರಣ ಕಾಮಗಾರಿ ನಡೆಯುತ್ತಿಲ್ಲ. ನೀರಸಾಗರ ಬತ್ತಿಹೋಗಿರುವುದರಿಂದ ತೊಂದರೆ ಹೆಚ್ಚಾಗಿದೆ. ಪ್ರಕೃತಿ ಮೇಲೆ ನಿಯಂತ್ರಣ ಹೇರಲು ಸಾಧ್ಯವೇ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

‘ಕೆಲಸ ನಿಂತಿಲ್ಲ. ವಿಶ್ವಬ್ಯಾಂಕ್‌ನಿಂದ ಸಾಲ ಮಂಜೂರಾಗಿದ್ದು, ಟೆಂಡರ್‌ ಕರೆಯಲಾಗಿದೆ. ಸಮೀಕ್ಷೆ ಕಾರ್ಯವೂ ಮುಗಿದಿದೆ. ಆದರೆ, ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿಲ್ಲವಾದ್ದರಿಂದ ಕೆಲಸ ಪ್ರಾರಂಭವಾಗಿಲ್ಲ’ ಎಂದು ಮೇಯರ್‌ ಸುಧೀರ ಸರಾಫ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.