ADVERTISEMENT

`ಸಂತರ ಸಹವಾಸದಿಂದ ಬಾಳು ಹಸನು'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:38 IST
Last Updated 6 ಡಿಸೆಂಬರ್ 2012, 6:38 IST

ನವಲಗುಂದ: ಜನನ, ಶಿಕ್ಷಣ, ಸಂಸಾರ, ಬದುಕು, ಮಕ್ಕಳು ಹೀಗೆ ಮೂರು ಅಕ್ಷರಗಳ ಮಾಯೆಯಾಗಿರುವ ಬದುಕನ್ನು ಗೆಲ್ಲಬೇಕಾದರೆ ಸಂತರ ಮಹಾಂತರ ಸಹವಾಸ ಅವಶ್ಯ. ಇದರಿಂದ ಬಾಳು ಹಸನಾಗುವುದು ಎಂದು ಸೊರಟೂರು ಹಿರೇಮಠದ ಫಕ್ಕೀರೇಶ್ವರ ಸ್ವಾಮೀಜಿ ಹೇಳಿದರು.

ಅವರು ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಜರುಗುತ್ತಿರುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದ 21ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಿಷ್ಠೆಯಿಂದ ಇಷ್ಟಲಿಂಗ ಪೂಜೆ ಮಾಡಿದಾಗ ಗೃಹಸ್ಥರೂ ಶಿವಾನುಭವ ಹೊಂದಬಹುದು. ಧ್ಯಾನ, ಇಷ್ಟಲಿಂಗ ಪೂಜೆಗಾಗಿ ದಿನದ ಸ್ವಲ್ಪ ಸಮಯ ಮೀಸಲಿಟ್ಟರೆ ಮಾನಸಿಕ ನೆಮ್ಮದಿ ಪಡೆಯಬಹುದು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಧವರಾವ್ ಆನೆಗುಂದಿ ಮಾತನಾಡಿ, ರಾಷ್ಟ್ರೀಯತಾವಾದ ಇಂದು ಕವಲುದಾರಿಯಲ್ಲಿದೆ. ಜಾತಿ, ಧರ್ಮ, ಪಂಥಗಳನ್ನು ಮೀರಿದ ಜನಾಂಗದಿಂದ ಮಾತ್ರ ಸುಖಿ ರಾಜ್ಯದ ಕಲ್ಪನೆ ಸಾಧ್ಯ. ಯುವಜನರಲ್ಲಿ ಭಾವೈಕ್ಯದ ಮೌಲ್ಯಗಳು ಕಡಿಮೆಯಾಗುತ್ತಿರುವುದು ಎಂದು ವಿಷಾದನೀಯ ಎಂದರು.

ಕೊಳ್ಳುಬಾಕ ಸಂಸ್ಕೃತಿಯು ಬಂಡವಾಳಶಾಹಿ ಶಕ್ತಿಗಳನ್ನು ಪ್ರಚೋದಿಸುತ್ತಿದೆ. ಯಾವುದೇ ಧರ್ಮದಿಂದ ಬಲವಂತದ ಮತಾಂತರ ದೇಶದ ಸಾರ್ವಭೌಮತೆಗೆ ಅಪಾಯಕಾರಿ. ಏಕತೆ, ಸಮಗ್ರತೆ ಮತ್ತು ಭಾವ್ಯಕದ ಮೂಲಕ ದೇಶದ ಭದ್ರತೆ ಹಾಗೂ ಉನ್ನತಿಗೆ ಪ್ರತಿಯೊಬ್ಬರೂ ಸಹಕರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಗದುಗಿನ ಪುಟ್ಟರಾಜ ಗವಾಯಿ ಸಂಗೀತ ಕಾಲೇಜಿನ ಉಪನ್ಯಾಸಕಿ ಡಾ. ಸುಮಿತ್ರಾ ಕಾಡದೇವರಮಠ ಅವರು ದುರ್ಗಾ ರಾಗದಲ್ಲಿ ಮೋಹನ ಮುರಳಿ ಭಜನೆ, ಶಿವಸ್ತುತಿ, ವಚನ, ಭಕ್ತಿಸಾರ, ಶರಣ ಸಂಸ್ಕೃತಿ ಪರಿಚಯಿಸುವ ಗೀತೆಗಳ ಗಾಯನದ ಪ್ರಸ್ತುತ ಪಡಿಸಿದರು. ಪರಶುರಾಮ ಕಟ್ಟಿ ಹಾರ್ಮೋನಿಯಂ ಹಾಗೂ ಬಸವರಾಜ ಕೊಡಗಾನೂರ ತಬಲಾ ಸಾಥ್ ನೀಡಿದರು.

ನಿವೃತ್ತ ಶಿಕ್ಷಕ ಎನ್.ಎಚ್.ಪುರಾಣಿಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕ.ಜಾ. ಪರಿಷತ್ ಅಧ್ಯಕ್ಷ ಎ.ಬಿ. ಕೊಪ್ಪದ, ಶ್ರೀಕಾಂತ ಪಾಟೀಲ, ಬಸವರಾಜ ಚಕ್ರಸಾಲಿ ಸನ್ಮಾನಿಸಿದರು. ಅಡಿವೆಪ್ಪ ಕಮತರ ಪ್ರಾರ್ಥಿಸಿದರು. ಸಂಜೀವಗೌಡ ಹಿರೇಗೌಡರ ಸ್ವಾಗತಿಸಿದರು. ಎಂ.ಎಸ್. ಶಿರಿಯಣ್ಣವರ ನಿರೂಪಿಸಿದರು. ಡಿ.ಎಚ್. ಮಳಲಿ ವಂದಿಸಿದರು.

ಬೆಳಿಗ್ಗೆ ಮಕ್ಕಳು ಹಾಗೂ ಮಹಿಳೆಯರಿಗಾಗಿ ಯೋಗಾಸನ ಶಿಬಿರ ಏರ್ಪಡಿಸಲಾಗಿತ್ತು. ಅನುರಾಧಾ ಶಿರಿಯಣ್ಣವರ ಹಾಗೂ ಎಂ.ಎಸ್. ಶಿರಿಯಣ್ಣವರ ಯೋಗ ತರಬೇತಿ ನೀಡಿದರು.

ಶಿರಿಯಣ್ಣನವರ ಮಾತನಾಡಿ, ಭಾರತೀಯರು ಯೋಗಾಸನ ವಿದ್ಯೆಯನ್ನು ಮರೆತಿದ್ದಾರೆ. ಪಾಶ್ವಿಮಾತ್ಯರು ಯೋಗದ ಬಗ್ಗೆ ಆಸಕ್ತಿ ವಹಿಸಿ ಜೀವನವನ್ನು ಪಾವನ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿಯೇ ಹುಟ್ಟಿ  ಬೆಳೆದ ಈ ವಿದ್ಯೆಯನ್ನು ಉಳಿಸಬೇಕಾದರೆ ದೇಶದಾದ್ಯಂತ ತರಬೇತಿ ಶಿಬಿರ ಏರ್ಪಡಿಸಿ ಯುವಕರಿಗೆ ಮಾರ್ಗದರ್ಶನ ನೀಡುವುದು ಅವಶ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.