ಕುಂದಗೋಳ: `ದ್ವೇಷ ಬಿಡು, ಪ್ರೀತಿ ಮಾಡು, ಜಾತಿ ಬಿಡು, ನೀತಿ ಹಿಡಿ~ ಎಂಬ ತತ್ವದ ಅಡಿಯಲ್ಲಿ ಇಲ್ಲಿನ ಹನುಮಂತ ಭೂಪ ಸದ್ಗುಣಮಣಿ ಶಾಂತ ರೂಪನ ಜಾತ್ರೆ ಶನಿವಾರ ಸಂಭ್ರಮದಿಂದ ನಡೆಯಿತು.
ತೇರು ಮಾರುತಿ ದೇವಸ್ಥಾನದ ಬಲ ಭಾಗ ದಿಂದ ಹೊರಟು ಅಳಗವಾಡಿ ಮನೆ ಮುಂದೆ ತೆರಳಿ, ಬಸವಣ್ಣೆಪ್ಪ ಕನೋಜ ಮನೆಯ ಎದುರಿಗೆ ಹಾದು ಬಸವಣ್ಣದೇವರ ಗುಡಿ ಎದುರಿಗೆ ಹಾದು ಮಾರುತಿ ದೇವಸ್ಥಾನದ ಎಡಭಾಗದಲ್ಲಿ ಬಂದು ನಿಂತಿತು. ಭಕ್ತರು ಉತ್ತತ್ತಿ, ಹಣ್ಣು, ಎಸೆದು ಕೃತಾರ್ಥರಾದರು. ಹೆಂಗಳೆಯುರು ಮನೆ ಮುಂದೆ ತೇರು ಬಂದಾಗ ನೀರು ಹಾಕಿ ಊದಿನಕಡ್ಡಿ ಬೆಳಗಿ, ಹಣ್ಣು, ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಶನಿವಾರ ಮುಂಜಾನೆ ಗೋಪಾಳ ತುಂಬಿಸುವ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಶಿವಾನಂದ ಮಠದ ಪೂಜ್ಯ ಬಸವೇಶ್ವರ ಸ್ವಾಮೀಜಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು. ಕಾಳಿದಾಸ ನಗರದ ಕರಿಸಿದ್ದೇಶ್ವರ ಡೊಳ್ಳಿನ ಮಜಲು ಮತ್ತು ಜಾಂಜ್, ಮಜಲು, ಕುದುರೆ ಸಕಲ ವಾದ್ಯ ವೈಭವ ದೊಂದಿಗೆ ರಥವನ್ನು ಎಳೆದರು.
ಭಾನುವಾರ ಸಂಜೆ ಕಡುಬಿನ ಕಾಳಗ ವಿಶಿಷ್ಟ ಮತ್ತು ವಿನೂತನವಾಗಿತ್ತು. ದೇವಸ್ಥಾನದ ಎದುರಿಗೆ ಹತ್ತು ಅಡಿ ಅಗಲದ ಮತ್ತು ಮೂರು ಅಡಿ ಆಳದ ತಗ್ಗಿನಲ್ಲಿ ಬಣ್ಣದ ನೀರನ್ನು ಹಾಕಿ ಟ್ಟಿದ್ದರು. ಅದರ ಮಧ್ಯದಲ್ಲಿಯೇ ಅಂದಾಜು ಹದಿನೈದು ಅಡಿ ಎತ್ತರದ ಜಾಗೆಯಲ್ಲಿ ಕಟ್ಟಗಿಯ ಕಂಬಕ್ಕೆ ಕಾಯಿ ಕಟ್ಟಿದ್ದರು.
ಅದನ್ನು ನಿಂತಲ್ಲೇ ಜಿಗಿದು ಕಾಯಿ ಹರಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನವತರುಣರು ಉತ್ಸಾಹ ದಿಂದ ಭಾಗವಹಿಸಿದ್ದರು. ಕಾಯಿ ಹರಿಯುವಾಗ ಕಾಯಿ ಸಿಕ್ಕರೂ, ಸಿಗದಿದ್ದರೂ ಜಿಗಿದವರು ಬಣ್ಣದ ನೀರಿನಲ್ಲಿ ಬಿದ್ದು ಎದ್ದರು. ವೀಕ್ಷಕರಿಗೆ ಇದೊಂದು ತರಹದ ಮೋಜು. ಸಾಹಸಿಗರಿಗೆ ಇದೊಂದು ಸವಾಲಾಗಿತ್ತು. ಕಾಯಿ ಹರೆದವರಿಗೆ ಮತ್ತು ವೀಕ್ಷ ಕರಿಗೆ ಓಕಳಿ ಎರಚಾಟ ನಡೆಯಿತು. ವಿಜೇತರಿಗೆ ರೂ 501 ನೀಡಿ ಸನ್ಮಾನ ಮಾಡಲಾಯಿತು.
ಭಾನುವಾರ ಸಂಜೆ ಟಿಎಪಿಸಿಎಂಎಸ್ ಬಯಲಿನಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದ ರುದ್ರಮ್ಮಾ ರಾಯಪ್ಪ ಗುಂಜಳ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ-ಬಾಲಕಿಯರು ಹಗ್ಗದ ಮಲ್ಲಕಂಬ, ಸ್ಥಿರ ಮಲ್ಲಕಂಬ, ಸ್ಕೀಪಿಂಗ್ ರೋಪ್ ಪ್ರದರ್ಶಿಸಿದರು.
ಗರ್ಭಾಸನ, ಹಲಾಸನ, ದ್ವಿಪಾದ ಶಿರಸಾಸನ, ಪದ್ಮಾಸನ ಇತ್ಯಾದಿ ಆಸನಗಳನ್ನು ಯಾವದೇ ಆಶ್ರಯವಿಲ್ಲದೆ, ಭೂಮಿ ಬಿಟ್ಟು ಸ್ವಲ್ಪ ಅಂತರದಲ್ಲಿ ಪ್ರದರ್ಶಿಸಿದರು. ಅನ್ನದಾಸೋಹ, ಝಗಝಗಿಸುವ ವಿದ್ಯುತ್ ಅಲಂಕಾರ, ರಥೋತ್ಸವ ಭಕ್ತರನ್ನು ಆಕರ್ಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.