ಧಾರವಾಡ: ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಹೊಂದಿರುವ ಕುಡವಕ್ಕಲಿಗ ಸಮಾಜದವರು ಸಾವಯವ ಕೃಷಿ ಪದ್ಧತಿಗೆ ಮೊದಲ ಆದ್ಯತೆ ನೀಡ ಬೇಕು ಎಂದು ಸುತ್ತೂರು ಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಭಾರತಿನಗರದ ಲಿಂಗರಾಜ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಿರ್ಮಿಸಿರುವ ಲಿಂಗರಾಜ ಸ್ಮಾರಕ ಸಮುದಾಯ ಭವನ, ಕುಡವಕ್ಕಲಿಗ ಸಮಾಜದ ಸಮಾವೇಶ ಹಾಗೂ ಲಿಂಗರಾಜರ 151ನೇ ಜಯಂತಿ ಉತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾರ್ಥದ ಯಾವುದೇ ಕನಸುಗಳನ್ನು ಹೊಂದದೇ ಸಮಷ್ಟಿಯ ಚಿಂತನೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ತಮ್ಮ ಸಾವಿರಾರು ಕೋಟಿ ರೂಪಾಯಿಗಳ ವಿಶಾಲ ಆಸ್ತಿಯನ್ನು ಧಾರೆ ಎರೆದ ತ್ಯಾಗವೀರ ಶಿರಸಂಗಿ ಲಿಂಗರಾಜರು ಸ್ವಾರ್ಥವಿಲ್ಲದ ಸಂತ ಎಂದರು.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲೀಕರಣ ಸಾಧಿಸುವ ನಿಟ್ಟಿನಲ್ಲಿ ಕುಡವಕಲ್ಲಿಗ ಸಮಾಜದ ಒಗ್ಗಟ್ಟು ಸಾಧಿಸಿವುದು, ಹಿತಚಿಂತನೆ ಮಾಡುವುದು ತಪ್ಪಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ವೀರಶೈವ ಧರ್ಮದ ಅಖಂಡತೆಗೆ ಧಕ್ಕೆಯಾಗದಂತೆ ಜಾಗೃತಿ ವಹಿಸಬೇಖು. ಹಾಗೆಯೇ ಸಮಸ್ತ ವೀರಶೈವರಲ್ಲಿ ಐಕ್ಯತೆ ಇರುವಂತೆ ಸಮಸ್ತ ಸಮಾಜ ಬಾಂಧವರು ಕಾಳಜಿ ವಹಿಸುವ ಅಗತ್ಯವೂ ಇದೆ ಎಂದು ಹೇಳಿದರು.
ಶಿರಸಂಗಿ ಸಂಸ್ಥಾನ ಸಂಪುಟ 1 ಮತ್ತು 2 ಅನ್ನು ಸಂಸದ ಪ್ರಹ್ಲಾದ ಜೋಶಿ ಬಿಡುಗಡೆಗೊಳಿಸಿ, ಸಾರ್ವತ್ರಿಕ ಹಿತ ಸಂವರ್ಧನೆಗೆ ತಮ್ಮೆಲ್ಲ ಅಮಗ್ರ ಆಸ್ತಿಯನ್ನು ತ್ಯಾಗ ಮಾಡಿ ಇಂದಿಗೂ ನಮ್ಮೆಲ್ಲರ ಸ್ಮರಣೆ ಯಲ್ಲಿ ಉಳಿದವರು ಲಿಂಗರಾಜರು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ವಿವಿಧ ಸೌಲಭ್ಯ ಗಳನ್ನು ಪಡೆಯುವಲ್ಲಿ ಕುಡವಕ್ಕಲಿಗ ಸಮಾಜವನ್ನು 2-ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ ಈಡೇರಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಡಾ. ಗುರುಲಿಂಗ ಕಾಪಸೆ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್.ಎಸ್.ಖೇಡ, ಲಿಂಗರಾಜ ಸರದೇಸಾಯಿ, ಬಿ.ಬಿ.ಪಾಟೀಲ, ಮೇಯರ್ ಪೂರ್ಣಾ ಪಾಟೀಲ, ಈಶ್ವರಚಂದ್ರ ಹೊಸಮನಿ, ಎಂ.ಂ.ಮೈಲಾರ, ಎಂ.ಜಿ.ಗಚ್ಚಣ್ಣವರ, ಗವಿಸಿದ್ದಪ್ಪ ಗುಳಗಣ್ಣವರ ಮಾತನಾಡಿದರು.
ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಕೋಯಪ್ಪ ನವರ, ಮಲ್ಲಪ್ಪ ಅಣ್ಣಿಗೇರಿ, ಹನುಮಂತಪ್ಪ ಸಂಭಾಜಿ ಅವರನ್ನು ಸನ್ಮಾನಿಸಲಾಯಿತು. ರವಿ ಕುಡವಕ್ಕಲಿಗೇರ ಸ್ವಾಗತಿಸಿದರು. ಪ್ರೊ. ಶಕುಂತಲಾ ಬಿರಾದಾರ, ಪ್ರೊ. ಎಂ.ಜಿ.ಗಚ್ಚಣ್ಣನವರ, ಅನಿತಾ ಕಡಪಟ್ಟಿ, ಗುರು ಮೂರ್ತಿ ಯರಗಂಬಳಿಮಠ ನಿರೂಪಿಸಿದರು. ವೈ.ಎಫ್.ಉಪನಾಳ ವಂದಿಸಿದರು.
ಸಮಾವೇಶದಲ್ಲಿ ಕುಡವಕ್ಕಲಿಗರ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂಬುದು ಸೇರಿದಂತೆ 7 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕುಡವಕ್ಕಲಿಗ ಸಮಾಜವನ್ನು 2ಎ ಮೀಸಲಾತಿಗೆ ಒಳಪಡಿಸಬೇಕು. ಕರ್ನಾಟಕ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಅಥವಾ ಗುಲಬರ್ಗಾ ವಿವಿಯಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಅಧ್ಯಯನ ಪೀಠ ಆರಂಭಿಸಬೇಕು. ಗದಗನಲ್ಲಿ ಪ್ರಾರಂಭಿಸಲಾಗುವ ಕೃಷಿ ವಿವಿಗೆ ಲಿಂಗರಾಜರ ಹೆಸರನ್ನಿಡಬೇಕು.
ವಿಜಾಪುರ, ಗುಲಬರ್ಗಾ, ಬೀದರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಲಿಂಗರಾಜ ವಿವಿಧೋದ್ದೇಶ ಸಂಸ್ಥೆಗಳಿಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿನಿಲಯಗಳನ್ನು ಕಟ್ಟಿಸಲು ತಲಾ ಎರಡು ಕೋಟಿ ರೂಪಾಯಿ ಅನುದಾನ ನೀಡಬೇಕು. ಬೆಂಗಳೂರಿನಲ್ಲಿ ಎರಡು ಎಕರೆ ಭೂಮಿ ನೀಡಬೇಕು.
ಲಿಂಗರಾಜರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಮುಖ ಸಭಾಂಗಣಕ್ಕೆ ಲಿಂಗರಾಜರ ಹೆಸರಿಡಬೇಕು ಎಂಬ ನಿರ್ಣಯಗಳನ್ನು ಸರ್ವಾನುಮತದಿಂದ ಸ್ವೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.