ADVERTISEMENT

ಸ್ವಾಸ್ಥ್ಯ ವಿಮಾ ಯೋಜನೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 7:10 IST
Last Updated 13 ಅಕ್ಟೋಬರ್ 2011, 7:10 IST

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಆರೋಗ್ಯ ವಿಮಾ ಕಾರ್ಯಕ್ರಮವಾದ `ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ~ಯನ್ನು ಧಾರವಾಡ ಜಿಲ್ಲೆಯಲ್ಲೂ ಆರಂಭಿಸಲಾಗಿದೆ.

ಜಿಲ್ಲಾಧಿಕಾರಿ ದರ್ಪಣ ಜೈನ್ ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿದರು. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಕಳೆದ ವರ್ಷ ಐದು ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಈ ವರ್ಷ ಉಳಿದ 25 ಜಿಲ್ಲೆಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದರು. ಬಿಪಿಎಲ್ ಕಾರ್ಡ್ ಹೊಂದಿದವರು ಹಾಗೂ ಅಸಂಘಟಿತ ವಲಯದವರಿಗೆ ಆದ್ಯತೆ ಮೇರೆಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ 1.13 ಲಕ್ಷ ಕುಟುಂಬಗಳನ್ನು ಈ ಯೋಜನೆ ವ್ಯಾಪ್ತಿಗೆ ತರಬೇಕಿದೆ. ಪ್ರತಿ ಕುಟುಂಬದ ಗರಿಷ್ಠ ಐದು ಜನ ಸದಸ್ಯರು ವಾರ್ಷಿಕ ರೂ 30 ಸಾವಿರದವರೆಗೆ ವೈದ್ಯಕೀಯ ಸೌಲಭ್ಯ ಪಡೆಯಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಜಿಲ್ಲೆಯ 5.50 ಲಕ್ಷ ಜನ ಈ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.

ವೈದ್ಯಕೀಯ ವೆಚ್ಚವಲ್ಲದೆ ಆಸ್ಪತ್ರೆಗೆ ಹೋಗಿ ಬರಲು ಪ್ರತಿ ಭೇಟಿಗೆ ರೂ 100 ಭತ್ಯೆಯನ್ನು ನೀಡಲಾಗುವುದು. ಪ್ರತಿ ವ್ಯಕ್ತಿ ವರ್ಷದಲ್ಲಿ ಗರಿಷ್ಠ ಹತ್ತು ಸಲ ಪ್ರಯಾಣ ಭತ್ಯೆಯನ್ನು ತೆಗೆದುಕೊಳ್ಳಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮಾ ಮೊತ್ತವನ್ನು ಭರಿಸುವುದರಿಂದ ಫಲಾನುಭವಿಗಳು ಯಾವುದೇ ಹಣ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ವಿಮಾ ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸರ್ಕಾರ ಆಸ್ಪತ್ರೆಗಳ ಜಾಲವನ್ನು ಗುರುತಿಸಿದೆ. ಸುಮಾರು  1,090 ಕಾಯಿಲೆಗಳಿಗೆ ಈ ಯೋಜನೆ ಮೂಲಕ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಯಶಸ್ವಿನಿ ಹಾಗೂ ಆರೋಗ್ಯಶ್ರೀ ಯೋಜನೆ ಸಹಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದು, ಕೆಲವು ಕಾಯಿಲೆಗಳಿಗಷ್ಟೇ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ ಎಂದು ತಿಳಿಸಿದರು.

ಯಶಸ್ವಿನಿ ಹಾಗೂ ಆರೋಗ್ಯಶ್ರೀ ಯೋಜನೆ ಸೌಲಭ್ಯ ಹೊಂದಿದವರೂ ಸ್ವಾಸ್ಥ್ಯ ವಿಮಾ ಯೋಜನೆಗೆ ಹೆಸರು ನೋಂದಾಯಿಸಬಹುದು. ಪ್ರತಿ ಕುಟುಂಬಕ್ಕೂ ಕುಟುಂಬದ ಮುಖ್ಯಸ್ಥರ ಭಾವಚಿತ್ರವಿರುವ ಸ್ಮಾರ್ಟ್ ಕಾರ್ಡ್ ಕೊಡಲಾಗುವುದು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನ. 1ರಂದು ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಅವರು ವಿವರಿಸಿದರು.

ನೋಂದಣಿ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರ ಭಾವಚಿತ್ರ ಹಾಗೂ ಬೆರಳಿನ ಗುರುತನ್ನು ಸಂಗ್ರಹಿಸಿ, ಆ ಎಲ್ಲ ಮಾಹಿತಿಯನ್ನು ಚಿಪ್‌ನಲ್ಲಿ ಹಾಕಲಾಗುತ್ತದೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರ ಗುರುತಿಸಿದ ಆಸ್ಪತ್ರೆಗಳಲ್ಲಿ ಸ್ಮಾರ್ಟ್ ಕಾರ್ಡ್ ಹಾಜರುಪಡಿಸುವ ಮೂಲಕ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಸ್ಮಾರ್ಟ್ ಕಾರ್ಡ್‌ಅನ್ನು ಸ್ವ್ಯಾಪ್ ಮಾಡಿದಾಗ ಚಿಕಿತ್ಸಾ ಸೌಲಭ್ಯ ಪಡೆಯುತ್ತಿರುವ ವ್ಯಕ್ತಿಯ ಖಾತೆಯಿಂದ ಕಾಯಿಲೆಗೆ ತಗಲುವ ವೆಚ್ಚ ಕಡಿತಗೊಳ್ಳುತ್ತಾ ಹೋಗುತ್ತದೆ. ರೂ 30 ಸಾವಿರದವರೆಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು. ನೋಂದಣಿ ಪ್ರಕ್ರಿಯೆಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, 70 ಕಂಪ್ಯೂಟರ್‌ಗಳನ್ನು ಈ ಕೆಲಸಕ್ಕಾಗಿ ಒದಗಿಸಲಾಗಿದೆ. ಪ್ರತಿ ಕುಟುಂಬ ನೋಂದಣಿಗೆ ರೂ 30 ಶುಲ್ಕ ನೀಡಬೇಕಾಗುತ್ತದೆ ಎಂದು ಹೇಳಿದರು.

ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ನೋಂದಣಿಯಾದ ತಕ್ಷಣ ಆ ಕುಟುಂಬದ ಯಾವುದೇ ಸದಸ್ಯ ಆರೋಗ್ಯ ಸೇವೆಯನ್ನು ಪಡೆಯಬಹುದು. ಜಿಲ್ಲೆಯಲ್ಲಿ ಕಿಮ್ಸ ಹಾಗೂ ಸಿವಿಲ್ ಆಸ್ಪತ್ರೆಯಲ್ಲದೆ 10 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಇಫ್ಕೊ-ಟೊಕಿಯೊ ಸಂಸ್ಥೆ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.