ADVERTISEMENT

ಹಣೆ ಬರಹ ಬರೆಯಲಿರುವ 14ಲಕ್ಷ ಮತದಾರರು

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಇಂದು; ಸೂಕ್ಷ್ಮ ಮತಗಟ್ಟೆಗಳಿಗೆ 303 ಮೈಕ್ರೊ ಅಬ್ಸರ್ವರ್‌

​ಪ್ರಜಾವಾಣಿ ವಾರ್ತೆ
Published 12 ಮೇ 2018, 5:15 IST
Last Updated 12 ಮೇ 2018, 5:15 IST
ಹಣೆ ಬರಹ ಬರೆಯಲಿರುವ 14ಲಕ್ಷ ಮತದಾರರು
ಹಣೆ ಬರಹ ಬರೆಯಲಿರುವ 14ಲಕ್ಷ ಮತದಾರರು   

ಧಾರವಾಡ ಜಿಲ್ಲೆಯ ಎಳು ವಿಧಾನಸಭಾ ಕ್ಷೇತ್ರಗಳ 14,79,450 ಮತದಾರರು ಕಣದಲ್ಲಿರುವ 98 ಅಭ್ಯರ್ಥಿಗಳ ಹಣೆಬರಹವನ್ನು ಶನಿವಾರ ಮತ ಚಲಾಯಿಸುವ ಮೂಲಕ ನಿರ್ಧರಿಸಲಿದ್ದಾರೆ.

ಜಿಲ್ಲೆಯಲ್ಲಿ 1,628 ಮತಗಟ್ಟೆಗಳಿದ್ದು, 9,780 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಯಂತ್ರ ಹಾಗೂ ವಿವಿ ಪ್ಯಾಟ್‌ ಯಂತ್ರಗಳೊಂದಿಗೆ ಸಿಬ್ಬಂದಿ ಮತಗಟ್ಟೆಗಳಿಗೆ ವಾಹನಗಳಲ್ಲಿ ತೆರಳಿದರು.

ನವಲಗುಂದದ ಶಂಕರ ಕಲಾ ಮಹಾವಿದ್ಯಾಲಯ, ಕುಂದಗೋಳದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು, ಧಾರವಾಡದ ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಆರ್‌ಎಲ್‌ಎಸ್‌ ಕಾಲೇಜು, ಕಲಘಟಗಿಯ ಸರ್ಕಾರಿ ಕೇಂದ್ರಿಯ ಮಾದರಿಯ ಶಾಲೆ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ ಹಾಗೂ ಮಹಿಳಾ ವಿದ್ಯಾಪೀಠ ಕಾಲೇಜುಗಳ ಆವರಣಗಳಲ್ಲಿ, ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಬೆಳಿಗ್ಗೆಯೇ ಕರ್ತವ್ಯಕ್ಕೆ ಹಾಜರಾಗಿದ್ದರು.

ADVERTISEMENT

ಸೂಕ್ಷ್ಮ ಮತಗಟ್ಟೆಗಳಿಗೆ 303 ಮೈಕ್ರೊ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಜಿಲ್ಲೆಯ 80 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣಾಧಿಕಾರಿಗಳು ನೇರ ವೀಕ್ಷಣೆ ಮಾಡಬಹುದಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.

ಜಿಲ್ಲೆಯ 1,628 ಮತಗಟ್ಟೆಗಳಿಗೆ ಮತದಾನ ಸಿಬ್ಬಂದಿ ನೇಮಿಸಲಾಗಿದ್ದು, 174 ಬಸ್ಸುಗಳು, 196 ಮ್ಯಾಕ್ಸಿಕ್ಯಾಬ್‌, 174 ಜೀಪು, ಮತಯಂತ್ರಗಳ ಸಾಗಿಸಲು 14 ಲಾರಿಗಳು ಸೇರಿ ಒಟ್ಟು 558 ವಾಹನಗಳನ್ನು ನಿಯೋಜಿಸಲಾಗಿದೆ.

ಅವಳಿ ನಗರದ 407 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಗಳು ಎಂದು ಗುರುತಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 10 ಕೇಂದ್ರ ಅರೆಸೇನಾ ಪಡೆಗಳ ತುಕಡಿ, 12 ಕೆಎಸ್‌ಆರ್‌ಪಿ ತುಕಡಿ, 2,500 ಪೊಲೀಸ್ ಸಿಬ್ಬಂದಿ, ಹೊರ ಜಿಲ್ಲೆಯ 500 ಜನ ಸಿಬ್ಬಂದಿ, ಹೊರ ರಾಜ್ಯದ 1,000 ಹಾಗೂ 500 ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ.

ಗ್ರಾಮೀಣ ಪ್ರದೇಶ 808 ಮತಗಟ್ಟೆಗಳಲ್ಲಿ 182 ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ, ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿಗಳಿಗೆ ನಿಯೋಜಿಸಿರುವ ಸಿಬ್ಬಂದಿ ಸೇರಿ ಒಟ್ಟು 915 ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಐವರು ಡಿವೈಎಸ್‌ಪಿ, 11 ಮಂದಿ ಇನ್‌ಸ್ಪೆಕ್ಟರ್‌, 22 ಮಂದಿ ಪಿಎಸ್‌ಐ, 43 ಮಂದಿ ಸೆಕ್ಟರ್ ಸಂಚಾರಿ ಪೊಲೀಸ್ ಅಧಿಕಾರಿ ಹಾಗೂ 113 ಎಎಸ್‌ಐ ಅನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.