ADVERTISEMENT

ಹುಬ್ಬಳ್ಳಿಗರ ಬದುಕಿನ ಭಾಗವಾಗಿದ್ದ ಭೋಂಗಾ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:10 IST
Last Updated 12 ಸೆಪ್ಟೆಂಬರ್ 2011, 8:10 IST

ಹುಬ್ಬಳ್ಳಿ: ಬಿಸಿಲು ನೋಡಿ ವೇಳೆ ತಿಳಿದುಕೊಳ್ಳುವ ಕಾಲವಿತ್ತು. ನೆರಳು ನೋಡಿ ಹೊತ್ತು ಹೇಳುತ್ತಿದ್ದ ಕಾಲವೂ ಇತ್ತು. ಆದರೆ ಭೋಂಗಾ ಕೂಗಿದಾಗೆಲ್ಲ ಇಷ್ಟೊತ್ತಾಯಿತೆಂದು ತಿಳಿದುಕೊಳ್ಳುವ ಕಾಲವೂ ನಗರದಲ್ಲಿತ್ತು.

ಇದನ್ನು ನೆನಪಿಸುತ್ತಿದೆ ಕಾರವಾರ ರಸ್ತೆಯ ಬದಿಗೆ ಸ್ಮಾರಕವಾಗಿ ನಿಂತಿರುವ ಚಿಮಣಿ. ಅದು ಜನರ ಬಾಯಲ್ಲಿ ಚಿಮಣಿ. ಹೊಗೆಯುಗುಳುತ್ತಿದ್ದುದರಿಂದ ಅದಕ್ಕೆ ಆ ಹೆಸರು. ಅದು ಭಾರತ್ ಮಿಲ್ ಅಥವಾ ಮಹದೇವ ಜವಳಿ ಗಿರಣಿಯಲ್ಲಿ ಉಳಿದಿರುವ ಏಕೈಕ ಸ್ಮಾರಕ. ಅದರ ಪಕ್ಕದಲ್ಲಿದ್ದ ಭೋಂಗಾ ಸದ್ದು ಅರ್ಧ ಹುಬ್ಬಳ್ಳಿಗೇ ಕೇಳುತ್ತಿತ್ತು. ಹೀಗಾಗಿ ಅದನ್ನು ಕೇಳಿಯೇ ಸಾವಿರಾರು ಜನರು ತಮ್ಮ ಬದುಕಿನ ವೇಳೆಯನ್ನು ಹೊಂದಿಸಿಕೊಳ್ಳುತ್ತಿದ್ದರು. ಆದರೆ ಈಗ ಅದು ಗತವೈಭವ.

ಹತ್ತಿ ಬಟ್ಟೆ ತಯಾರಿಸುವ ಗಿರಣಿಯಾಗಿದ್ದ ಅದು 1897ರಲ್ಲಿ ಆರಂಭಗೊಂಡಿತು. ಇದಕ್ಕೆ ಕುಲಕರ್ಣಿ, ದೇಶಪಾಂಡೆ, ಚಿಟಗುಪ್ಪಿ ಹಾಗೂ ಇರಕಲ್ಲ ಮಾಲೀಕರು. 60 ಎಕರೆಯಷ್ಟು ವಿಸ್ತಾರವಾದ ಈ ಗಿರಣಿಯಲ್ಲಿ ಕಾರ್ಮಿಕರ ವಸತಿಗೃಹವೂ ಇತ್ತು. ಇದ್ದಿಲು ಹಾಕಿದಾಗ ಏಳುವ ಹೊಗೆಯನ್ನು ಬಿಡಲು ಎತ್ತರವಾದ ಬಾಯ್ಲರ್ ಅಥವಾ ಚಿಮಣಿಯನ್ನು ಕಟ್ಟಲಾಯಿತು.
 
ಹತ್ತಿ ಬಟ್ಟೆಗೆ ಸ್ಟೀಮ್ ಬೇಕಿತ್ತು. ಹೀಗಾಗಿ 24 ಗಂಟೆಯೂ ಅದು ಕಾರ್ಯ ನಿರ್ವಹಿಸುತ್ತಿತ್ತು. ಅದರ ಪಕ್ಕದಲ್ಲಿದ್ದ ಸೈರನ್ ಕೂಗುತ್ತಿತ್ತು. ಅದನ್ನು ಪಾಳಿಯಲ್ಲಿದ್ದ ವ್ಯಕ್ತಿಯೊಬ್ಬ ಕೂಗಿಸುತ್ತಿದ್ದ. ಮೊದಲ ಪಾಳಿಯವರನ್ನು ಎಚ್ಚರಿಸಲು ಹಾಗೂ ಸೂಚನೆ ಕೊಡಲು ಬೆಳಿಗ್ಗೆ 6 ಗಂಟೆಗೆ, 6.30ಕ್ಕೆ ಹಾಗೂ 6.50ಕ್ಕೆ ಭೋಂಗಾ ಕೂಗುತ್ತಿತ್ತು. ಆಮೇಲೆ ಊಟಕ್ಕೆಂದು ಬೆಳಿಗ್ಗೆ 11.30 ಗಂಟೆಗೆ ಹಾಗೂ ಒಳಗೆ ಬರಬೇಕೆನ್ನುವ ಸಲುವಾಗಿ 11.50ಕ್ಕೆ ಮತ್ತೆ ಕೂಗಿ ಕರೆಯುತ್ತಿತ್ತು. ಎರಡನೆಯ ಪಾಳಿಯವರನ್ನು ಒಳಗೆ ಬರಲು ಮಧ್ಯಾಹ್ನ 3.30ಕ್ಕೆ ಕೂಗುತ್ತಿತ್ತು. ಆಮೇಲೆ ರಾತ್ರಿ 12ರಿಂದ ಬೆಳಗಿನ 7 ಗಂಟೆಯವರೆಗೆ ಮೂರನೆಯ ಪಾಳಿ. `6 ಸಾವಿರ ಕಾರ್ಮಿಕರು ದುಡಿಯುತ್ತಿದ್ದ ಈ ಗಿರಣಿಯಲ್ಲಿ ಬಂದ್ ಆಗಿ ಮತ್ತೆ ಶುರುವಾಗುತ್ತಿತ್ತು. ಅಂತಿಮವಾಗಿ ಮುಚ್ಚಿದ್ದು 1998ರಲ್ಲಿ. ಆಗ 425 ಕಾರ್ಮಿಕರು ಮಾತ್ರ ಇದ್ದರು. ಅವರಲ್ಲಿ ಈಗ 26 ಜನರು ಮೃತಪಟ್ಟಿದ್ದಾರೆ.

ಗಿರಣಿಯ ಯಂತ್ರಗಳು ಹಳೆಯದಾದವು. ಹೊಸ ಯಂತ್ರಗಳನ್ನು ಅಳವಡಿಸಲಿಲ್ಲ. ಹೀಗಾಗಿ ಬಟ್ಟೆ ತಯಾರಿಕೆ ನಿಂತು ಕೇವಲ ನೂಲು ಮಾರಾಟಕ್ಕೆ ಮಾತ್ರ ಸೀಮಿತವಾಯಿತು. ಆಮೇಲೆ ಅದು ಕೂಡಾ ನಿಂತಿತು~ ಎಂದು ಬೇಸರ ವ್ಯಕ್ತಪಡಿಸಿದರು ಗಿರಣಿಯಲ್ಲಿ ಸ್ಪಿನ್ನಿಂಗ್ ವಿಭಾಗದಲ್ಲಿ ಸೈಡರ್ ಎಂದು ಕರ್ತವ್ಯ ನಿರ್ವಹಿಸಿದ ಹನುಮಂತಪ್ಪ ಮಾಲಪಲ್ಲಿ.

`ಈ ಗಿರಣಿಯಲ್ಲಿ ತಯಾರಾದ ಬಟ್ಟೆಗಳು ರಷ್ಯಾಕ್ಕೆ ರಫ್ತಾಗುತ್ತಿದ್ದವು. ಜನತಾ ಸರ್ಕಾರವಿದ್ದಾಗ ಜನತಾ ಬಟ್ಟೆಯೆಂದು ಸರ್ಕಾರ ಖರೀದಿಸುತ್ತಿತ್ತು. ಆಮೆಲೆ ಬಂದ್ ಆಗುತ್ತದೆ ಎಂದಾಗ ಹೋರಾಟ ಮಾಡಿದೆವು. ಪ್ರಯೋಜನವಾಗಲಿಲ್ಲ. ಗಿರಣಿಯ ವಸತಿಗೃಹವೇ ಗಿರಣಿ ಚಾಳವಾಯಿತು. ಇದನ್ನು 1976ರಲ್ಲಿ ಕೊಳೆಗೇರಿ ಎಂದು ಘೋಷಿಸಲಾಯಿತು. ಒಟ್ಟು 625 ಮನೆಗಳಿವೆ. ಈಗಲೂ ಅನೇಕ ಬೇಡಿಕೆಗಳಿವೆ. ಈಡೇರಿಲ್ಲ~ ಎಂದರು ಮಾಲಪಲ್ಲಿ.

`ಆರು ಗಂಟೆಗೆ ಭೋಂಗಾ ಕೂಗುವ ಮೊದಲೇ ಏಳುತ್ತಿದ್ದೆವು. ಆರೂವರೆಗೆ ಮತ್ತೆ ಭೋಂಗಾ ಒದರಿದಾಗ ಬುತ್ತಿ ಕಟ್ಟಿಕೊಂಡು ಮೂರನೇ ಸಲ ಭೋಂಗಾ ಕೂಗುವ ಹೊತ್ತಿಗೆ ಗಿರಣಿ ಹತ್ತಿರ ಇರುತ್ತಿದ್ದೆವು. ನೂಲಿನ ಉಂಡೆ ಕಟ್ಟಿಕೊಡುತ್ತಿದ್ದೆವು. 20 ರೂಪಾಯಿ ಪಗಾರಕ್ಕೆ ಸೇರಿದವಳು 20 ವರ್ಷದ ನಂತರ 3 ಸಾವಿರ ರೂಪಾಯಿ ಪಡೆದೆ. ಮಕ್ಕಳನ್ನು ಎತ್ತಿಕೊಂಡು ಗಿರಣಿಗೆ ಹೋಗುತ್ತಿದ್ದೆವು. ಅಲ್ಲಿ ಮಕ್ಕಳ ಮನೆಯಿತ್ತು. ಹಾಲು ಕುಡಿಸಲು ಹೋಗುವುದಷ್ಟೇ ನಮ್ಮ ಕೆಲಸ. ಮಕ್ಕಳನ್ನು ನೋಡಿಕೊಳ್ಳಲು ಆಯಾ ಇದ್ದಳು. ಈಗ ಖಾಲಿ ಕುಂತಿರುವೆ. ಗಟ್ಟಿಯಿದ್ದವರು ಹೋಟೆಲಿನ ಕಸಮುಸರೆ ತೊಳೆಯಲು, ದವಾಖಾನೆಗಳಲ್ಲಿ ನೆಲ ಒರೆಸಲು ಹೋಗುತ್ತಿದ್ದಾರೆ~ ಎಂದರು ಗಿರಣಿ ಚಾಳದ ನಿವಾಸಿ ಹೊಳೆಯವ್ವ ಕಮಲದಿನ್ನಿ.

`ಹಿಂದೆ ಚಾವಿ ಕೊಡುವ ವಾಚುಗಳಿದ್ದವು. ಇಂದು ಚಾವಿ ಕೊಟ್ಟ ವೇಳೆಗೆ ನಾಳೆಯೂ ಕೊಡಬೇಕಿತ್ತು. ಇದಕ್ಕೆ ಗಿರಣಿಯ ಭೋಂಗಾ ಸಹಾಯವಾಗುತ್ತಿತ್ತು~ ಎಂದು ಸ್ಮರಿಸಿಕೊಂಡರು ವಿಕಾಸನಗರ ನಿವಾಸಿ ಹಾಗೂ ಜೂನಿಯರ್ ಟೆಕ್ನಿಕಲ್ ಶಾಲೆಯ ನಿವೃತ್ತ ಪ್ರಾಚಾರ್ಯರಾದ ಮಹಾನಂದಾ ಹುಲ್ಲೂರ. `ನಸುಕಿನಲ್ಲೇ ಎದ್ದರೂ ಭೋಂಗಾ ಕೂಗು ಕೇಳಿದಾಗೆಲ್ಲ ಇಷ್ಟೊತ್ತಾಯಿತು ಎಂದು ಗಡಿಬಿಡಿಯಲ್ಲಿ ಶಾಲೆಗೆ ಹೋಗಲು ಸಿದ್ಧಳಾಗುತ್ತಿದ್ದೆ. ಮನೆಯಲ್ಲಿ ವಾಚಿರುತ್ತಿತು. ಅದು ಮಲಗುವ ಕೋಣೆಯ ಟೇಬಲ್ ಮೇಲೆ. ಹಜಾರಿನಲ್ಲಿ ಗೋಡೆ ಗಡಿಯಾರ ಇರುತ್ತಿತ್ತು. ಹೋಗಿ ನೋಡಬೇಕಿತ್ತು. ಆಗ ಭೋಂಗಾ ಕೂಗಿದರೆ ಇಷ್ಟೊತ್ತಾಯಿತು ಎಂದು ಅಂದುಕೊಳ್ಳುತ್ತಿದ್ದೆವು~ ಎನ್ನುತ್ತಾರೆ ಭೈರಿದೇವರಕೊಪ್ಪದ ಜಗದ್ಗುರು ಶಿವಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಮೊಟೇಬೆನ್ನೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.