ADVERTISEMENT

ಹೆಸ್ಕಾಂ: 93 ಗುತ್ತಿಗೆ ನೌಕರರು ಮನೆಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 6:15 IST
Last Updated 9 ಅಕ್ಟೋಬರ್ 2011, 6:15 IST

ಹುಬ್ಬಳ್ಳಿ: ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿ ಯೋಜನೆಯಡಿ ಸಂಪರ್ಕ ಪಡೆದ ಗ್ರಾಹಕರಿಂದ ವಿದ್ಯುತ್ ಬಿಲ್ ವಸೂಲಿಯಲ್ಲಿ ನಿಗದಿತ ಗುರಿ ಸಾಧಿಸಲಿಲ್ಲ ಎಂಬ ಕಾರಣಕ್ಕೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಗ್ರಾಮ ವಿದ್ಯುತ್ ಪ್ರತಿನಿಧಿ ಗಳನ್ನು (ಬಿಲ್ ಕಲೆಕ್ಟರ್) ಕೆಲಸದಿಂದ ವಜಾ ಮಾಡಿ ರುವುದು ವಿವಾದಕ್ಕೆ ಕಾರಣವಾಗಿದೆ.

ಕಳೆದ 4 ತಿಂಗಳಲ್ಲಿ 93 ಮಂದಿ ಯನ್ನು ಮನೆಗೆ ಕಳುಹಿಸಿರುವ ಹೆಸ್ಕಾಂ, ಹಂತ ಹಂತವಾಗಿ ಇನ್ನಷ್ಟು ಮಂದಿ ಯನ್ನು ಕೆಲಸದಿಂದ ತೆಗೆದು ಹಾಕಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ 1180 ಗ್ರಾಮ ವಿದ್ಯುತ್ ಪ್ರತಿನಿಧಿಗಳು ಅಕ್ಟೋಬರ್ 2ರಿಂದ ಕೆಲಸ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಕಾರವಾರ ಹಾಗೂ ವಿಜಾಪುರ ಜಿಲ್ಲೆಗಳ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಬಿಲ್ ವಿತರಣೆ, ವಸೂಲಿ ಹಾಗೂ ಗ್ರಾಹಕರ ಕುಂದು ಕೊರತೆ ಆಲಿಸುವ ಸೇವೆ  ಸ್ಥಗಿತ ಗೊಂಡಿದೆ.

ಅಡಕತ್ತರಿಯಲ್ಲಿ ಕೆಲಸ: ತಿಂಗಳಿಗೆ 18 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಗ್ರಾಹಕ ರಿಂದ ವಿದ್ಯುತ್‌ಬಿಲ್ ವಸೂಲಿ ಮಾಡುವಂತೆ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಹೆಸ್ಕಾಂ ಸೂಚನೆ ನೀಡಿದೆ. ಉಚಿತ ವಿದ್ಯುತ್ ಯೋಜನೆಯಡಿ ಕೇವಲ ಒಂದು ಬಲ್ಬ್ ಬಳಕೆ ಮಾಡಿ, 18 ಯೂನಿಟ್‌ವರೆಗೆ ವಿದ್ಯುತ್ ಬಳಸುವವರನ್ನು ಬಡವರು ಎಂದು ಪರಿಗಣಿಸಿದೆ. ನಿಗದಿಗಿಂತ ಹೆಚ್ಚು ಬಳಕೆಯಾ ದಲ್ಲಿ ಬಿಲ್ ವಸೂಲಿಗೆ ಮುಂದಾಗಿದೆ. ಇದರಿಂದ 19 ಯೂನಿ ಟ್ ಬಳಕೆ ಮಾಡಿದರೂ ಗ್ರಾಹಕ ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಿದೆ.

ಹೆಸ್ಕಾಂನ ಆದೇಶದಂತೆ  ಬಿಲ್ ನೀಡಿದರೆ ಪಾವತಿಸಲು ಗ್ರಾಹಕರು ಒಪ್ಪುತ್ತಿಲ್ಲ. ಸರ್ಕಾರ ಉಚಿತವಾಗಿ ನಮಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ನಾವು ಪಾವತಿಸುವುದಿಲ್ಲ ಎಂದು ಖಡಾಖಂಡಿತ ವಾಗಿ ಹೇಳುತ್ತಿದ್ದಾರೆ. ಒತ್ತಾಯವಾಗಿ ಬಿಲ್ ಕೇಳಿದರೆ ಅಥವಾ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಗ್ರಾಹಕರು ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಇದರಿಂದ ಬಿಲ್ ಕಲೆಕ್ಟರ್‌ಗಳು ಅಡಕತ್ತರಿಯಲ್ಲಿ ಕೆಲಸ ಮಾಡು ವಂತಾಗಿದೆ.

`ಗೃಹಬಳಕೆ, ವಾಣಿಜ್ಯ ಬಳಕೆ, ಕೈಗಾರಿಕೆಗಳಿಗೆ ಬಳಕೆಯಾದ ವಿದ್ಯುತ್ ಬಿಲ್ ಶೇ. 100ರ ವರೆಗೆ ವಸೂಲಿ ಮಾಡಿದ್ದೇವೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ವಿದ್ಯುತ್‌ಬಿಲ್ ವಸೂಲಿ ಯಲ್ಲಿ ನಿಗದಿತ ಗುರಿ ಸಾಧಿಸಲಾಗಿಲ್ಲ. ಬಿಲ್ ಪಾವತಿ ಸುವಂತೆ ಮಾಧ್ಯಮ ಗಳಲ್ಲಿ ಪ್ರಚಾರ ಮಾಡುವ ಮೂಲಕ ಹೆಸ್ಕಾಂ ಗ್ರಾಹಕರಲ್ಲಿ ಜಾಗೃತಿ ಮೂಡಿ ಸಲಿ~ ಎನ್ನುತ್ತಾರೆ ರಾಜ್ಯ ಗ್ರಾಮೀಣ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಮಾಯಕೊಂಡ.

`ಪ್ರಜಾವಾಣಿ~ಯೊಂದಿಗೆ ಮಾತನಾ ಡಿದ ಅವರು, `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿ ದರು~ ಎಂಬಂತೆ  ಗ್ರಾಹಕರು ಬಿಲ್ ಪಾವತಿಸಲಿಲ್ಲ ಎಂದು 8 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್‌ಗಳನ್ನು ಈಗ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದು ಯಾವ ನ್ಯಾಯ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳು ಬಿಲ್ ಪಾವತಿಸದಂತೆ ಇತ್ತೀಚೆಗೆ ಹಿರೇ ಕೆರೂರಿನಲ್ಲಿ ಅಲ್ಲಿನ ಶಾಸಕರ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ಇಂತಹ ಸನ್ನಿವೇಶದಲ್ಲಿ ನಾವು ಬಿಲ್ ವಸೂಲಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ.

ಸರ್ಕಾರದಿಂದ ಗೌರವಧನ ಪಡೆಯುವ ನಮಗೆ ಸೇವಾ ನಿಯಮಾವಳಿ ಅನ್ವಯವಾಗುವುದಿಲ್ಲ. ಹಲ್ಲೆ ನಡೆದರೆ ಯಾರೂ ಗಂಭೀರವಾಗಿ ಪರಿಗಣಿಸುವು ದಿಲ್ಲ. ವಜಾ ಮಾಡಿರುವವರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳವವರೆಗೂ ಪ್ರತಿಭಟನೆ ಮುಂದುವರಿ ಸುತ್ತೇವೆ ಎಂದು ಹೇಳುತ್ತಾರೆ.

ಸಾಲು ರಜೆಗಳು ಬಂದಿರುವ ಹಿನ್ನೆಲೆ ಯಲ್ಲಿ ಬಿಲ್ ಕಲೆಕ್ಟರ್‌ಗಳ ಪ್ರತಿಭಟನೆ ಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎನ್ನುವ ಹೆಸ್ಕಾಂ ತಾಂತ್ರಿಕ ನಿರ್ದೇಶಕ ಚಿಕ್ಕ ನಂಜಯ್ಯ, ಈಗಾಗಲೇ ವಿದ್ಯುತ್ ಪ್ರತಿ ನಿಧಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಹೆಸ್ಕಾಂನ ವ್ಯವ ಸ್ಥಾಪಕ ನಿರ್ದೇಶಕರು ಚರ್ಚೆ ನಡೆಸಿದ್ದಾರೆ. ರಜೆ ಯಲ್ಲಿರುವ ಅವರು ಸೋಮವಾರ ಬರಲಿದ್ದು, ಬಿಲ್ ಕಲೆಕ್ಟರ್‌ಗಳ ಬೇಡಿಕೆಗಳ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.