ADVERTISEMENT

ಹೋರಾಟಕ್ಕೆ ನೌಕರರ ಸಜ್ಜು

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 6:02 IST
Last Updated 7 ಜೂನ್ 2013, 6:02 IST

ಹುಬ್ಬಳ್ಳಿ: ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರವಾನಗಿ ಪಡೆದು ಸ್ಟೇಜ್ ಕ್ಯಾರೇಜ್ ಆಗಿ ಹುಬ್ಬಳ್ಳಿ ಭಾಗದಲ್ಲಿ ಖಾಸಗಿ ಬಸ್‌ಗಳನ್ನು ಓಡಿಸುತ್ತಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತೀ ತಿಂಗಳು 12 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಕೆ.ಎಸ್.ಆರ್. ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಆರ್. ಎಫ್.ಕವಳಿಕಾಯಿ ಆರೋಪಿಸಿದರು.

ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಮಾಫಿಯಾದೊಂದಿಗೆ ಕೈ ಜೋಡಿಸಿರುವುದರಿಂದ ಈ ಹಿಂದೆ ಹಲವು ಬಾರಿ ದೂರು ನೀಡಿದರೂ, ಪತ್ರ ಬರೆದು ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕವಳಿಕಾಯಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.

ಮುಂದಿನ 10 ದಿನಗಳ ಒಳಗಾಗಿ ಖಾಸಗಿ ಬಸ್‌ಗಳ ಅಕ್ರಮ ಓಡಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಸಾರಿಗೆ ಸಂಸ್ಥೆ ನೌಕರರೇ ಯೂನಿಯನ್ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯಿಂದ ಬೆಳಗಾವಿ, ಗದಗ, ವಿಜಾಪುರ, ಬಾಗಲಕೋಟೆ, ಶಿರಸಿ, ದಾವಣಗೆರೆ, ಇಳಕಲ್ ನಗರಗಳಿಗೆ ಈ ರೀತಿ ಅಕ್ರಮವಾಗಿ ಖಾಸಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಕಾಂಟ್ರ್ಯಾಕ್ಟ್ ಕ್ಯಾರೇಜ್‌ನಡಿ ಅನುಮತಿ ಪಡೆದು ಸ್ಟೇಜ್ ಕ್ಯಾರೇಜ್ ಆಗಿ ಸಂಚರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನಡೆದಿದೆ. ಹಾಗಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಕ್ರಮ ತಪ್ಪಿಸಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ಜಾಣ ಕುರುಡು ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಳ ನೀಡಲು ಹಣವಿಲ್ಲ
ಮಾಸಿಕ ಆದಾಯ ಖೋತಾದಿಂದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ನೌಕರರ ಸಂಬಳದಿಂದ ಕಡಿತವಾದ ಜೀವವಿಮೆ ಹಣ, ನಿವೃತ್ತ ನೌಕರರಿಗೆ ನೀಡಬೇಕಾದ ಬಾಕಿ ಪಾವತಿಗೆ, ಡೀಸೆಲ್ ಬಾಕಿ ಹಣ ನೀಡಲು ಆಗುತ್ತಿಲ್ಲ. ನೌಕರರಿಗೆ ತಿಂಗಳ ಸಂಬಳ ಸರಿಯಾದ ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಸಾರಿಗೆ ಸಂಸ್ಥೆಯನ್ನು ಉಳಿಸಲು ಹಾಗೂ ನೌಕರರ ಹಿತಾಸಕ್ತಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಕವಳಿಕಾಯಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಐ.ಬಿ.ಶಿರನಳ್ಳಿ, ಕಾರ್ಯಾಧ್ಯಕ್ಷ ಎಂ.ಕೆ.ಮುಳವಾಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.