ADVERTISEMENT

ಕೋವಿಡ್: ವಾರದಲ್ಲಿ ಪ್ರಕರಣ ಶೇ 10ರಷ್ಟು ಹೆಚ್ಚಳ

ಹುಬ್ಬಳ್ಳಿ-ಧಾರವಾಡ ನಗರದಲ್ಲಿನ ಇತರೆಡೆಗಿಂತ ತುಸು ಹೆಚ್ಚು ಪ್ರಕರಣ

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಜನವರಿ 2022, 17:12 IST
Last Updated 18 ಜನವರಿ 2022, 17:12 IST
ವೈರಸ್‌–ಪ್ರಾತಿನಿಧಿಕ ಚಿತ್ರ
ವೈರಸ್‌–ಪ್ರಾತಿನಿಧಿಕ ಚಿತ್ರ   

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೋವಿಡ್ ತಪಾಸಣೆಗೆ ಒಳಪಟ್ಟವರಿಗೆ ಸ್ಥಳದಲ್ಲೇ ಕಿಟ್‌ಗಳನ್ನು ನೀಡುವ ಕೆಲಸವನ್ನು ಜಿಲ್ಲಾಡಳಿತ ಆರಂಭಿಸಿದೆ.

ಕೋವಿಡ್ ಮಾರ್ಗಸೂಚಿ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಇದ್ದಾಗಿಯೂ 3ನೇ ಅಲೆಯ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಏರುಮುಖವಾಗಿಯೇ ಇದೆ. ಅದರಲ್ಲೂ ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿನ ಕೋವಿಡ್ ಪ್ರಕರಣಗಳು ಇತರೆಡೆಗಿಂತ ತುಸು ಹೆಚ್ಚು.

ಜ. 7ರಂದು 3480 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಶೇ 7ರ ದರದಲ್ಲಿ 262 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಜ. 17ರಂದು 5505ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿ, ಶೇ 17ರ ದರದಲ್ಲಿ 974 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ 3149 ಸಕ್ರಿಯ ಪ್ರಕರಣಗಳಿವೆ. ‌ಈವರೆಗೂ 18 ವರ್ಷದೊಳಗಿನ 587 ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ಪಾಲಕರಲ್ಲಿನ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ADVERTISEMENT

ಸದ್ಯ ಸೋಂಕಿತರಿಗಾಗಿಜಿಲ್ಲಾಡಳಿತ 3137 ಹಾಸಿಗೆ ಕೋವಿಡ್‌ಗಾಗಿ ಮೀಸಲಿಟ್ಟಿದೆ. ಸದ್ಯ 142 ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2961 ಸೋಂಕಿತರು ಗೃಹ ಆರೈಕೆಯಲ್ಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶೇ 96ರಷ್ಟು ಹಾಸಿಗೆ ಖಾಲಿ ಇವೆ.

ಆರಂಭಿಸಿರುವ ಮೂರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ 250 ಹಾಸಿಗೆಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಈ ಕೇಂದ್ರಗಳಲ್ಲಿ ಈವರೆಗೂ 46 ಸೋಂಕಿತರು ಮಾತ್ರ ಆರೈಕೆ ಪಡೆಯುತ್ತಿದ್ದಾರೆ. ಆದರೆ ಹಿಂದಿನ ಎರಡು ಅಲೆಗೆ ಹೋಲಿಸಿದಲ್ಲಿ ಈ ಬಾರಿ ಸಾವಿನ ಪ್ರಕರಣ ಕಡಿಮೆ ಎನ್ನುವುದು ಸಮಾಧಾನಕರ ಸಂಗತಿ. ಕಳೆದ ಒಂದು ತಿಂಗಳಲ್ಲಿ ಸೋಂಕಿಗೆ ನಾಲ್ಕು ಜನ ಬಲಿಯಾಗಿದ್ದಾರೆ.

ಕೋವಿಡ್ ರೋಗಲಕ್ಷಣ ಇರುವವರ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಿದ ತಕ್ಷಣ ವ್ಯಕ್ತಿಗೆ ಪ್ಯಾರಸಿಟಮಾಲ್, ಸಿಟ್ರಜಿನ್, ಝಿಂಕ್ ಹಾಗೂ ವಿಟಮಿನ್–ಸಿ ಮಾತ್ರೆಯುಳ್ಳ ಕಿಟ್‌ ಅನ್ನು ಆರೋಗ್ಯ ಇಲಾಖೆ ನೀಡುತ್ತಿದೆ.

ಈ ನಡುವೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುಗತಿಯಲ್ಲಿದೆ. ಹೀಗಾಗಿ ಸಂತೆ, ಜಾತ್ರೆಗಳು ಹಾಗೂ ಜನ ಸೇರುವ ಕಾರ್ಯಕ್ರಮಗಳು ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದರು.

‘ಸೋಂಕು ನಿಯಂತ್ರಿಸಲು ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಹಾಗೂ ಚಿಟಗುಪ್ಪಿ ಆಸ್ಪತ್ರೆ ಹಾಗೂ 3 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಿನದ 24 ತಾಸು ಹೊರರೋಗಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.