ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: 16 ಚುನಾವಣೆ; ಐವರೇ ಸಂಸದರು

ಗರಿಷ್ಠ ಮತಗಳ ಗೆಲುವು: ಸರೋಜಿನಿ ಮಹಿಷಿ ದಾಖಲೆ ಅಬಾಧಿತ

ಬಸವರಾಜ ಹವಾಲ್ದಾರ
Published 26 ಏಪ್ರಿಲ್ 2019, 10:15 IST
Last Updated 26 ಏಪ್ರಿಲ್ 2019, 10:15 IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಇಲ್ಲಿಯವರೆಗೆ ಹದಿನಾರು ಬಾರಿ ಚುನಾವಣೆ ನಡೆದಿದ್ದು, ಐವರಿಗೆ ಮಾತ್ರ ಸಂಸದರಾಗುವ ಅವಕಾಶ ಸಿಕ್ಕಿದೆ.

1952 ರಿಂದ 2014ರವರೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮರು ಆಯ್ಕೆಯಾಗಿರುವುದರಿಂದ ಸಂಸದರಾಗಿರುವವರ ಸಂಖ್ಯೆ ಕಡಿಮೆ ಇದೆ.

1952 ಹಾಗೂ 57ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಪಿ. ಕರಮಕರ ಆಯ್ಕೆಯಾಗಿದ್ದರು. 1962 ರಿಂದ 77ರವರೆಗೆ ಸತತ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸರೋಜಿನಿ ಮಹಿಷಿ ಆಯ್ಕೆಯಾಗುತ್ತಾರೆ.

ADVERTISEMENT

1980 ರಿಂದ 91ರವರೆಗೆ ನಡೆಯುವ ನಾಲ್ಕು ಚುನಾವಣೆಗಳಲ್ಲಿ ಡಿ.ಕೆ. ನಾಯ್ಕರ್ ಅವರು ಗೆಲುವು ಸಾಧಿಸುತ್ತಾರೆ. ಮೊದಲ ಹತ್ತೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

1996 ರಿಂದ 99ರಲ್ಲಿ ನಡೆಯುವ ಮೂರು ಚುನಾವಣೆಗಳಲ್ಲಿ ವಿಜಯ ಸಂಕೇಶ್ವರ ಗೆಲುವು ಸಾಧಿಸುತ್ತಾರೆ. 2004 ರಿಂದ ಇಲ್ಲಿಯವರೆಗೆ ಪ್ರಹ್ಲಾದ ಜೋಶಿ ಸತತ ಮೂರು ಚುನಾವಣೆಗಳಲ್ಲಿ ಗೆಲವು ಸಾಧಿಸಿದ್ದಾರೆ. ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ.

ಐವರಲ್ಲಿ ನಾಲ್ವರು ಹ್ಯಾಟ್ರಿಕ್‌: ಮೊದಲ ಎರಡು ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಡಿ.ಪಿ. ಕರಮಕರ ಅವರನ್ನು ಹೊರತುಪಡಿಸಿದರೆ, ಉಳಿದಂತೆ ಸಂಸದರಾದ ನಾಲ್ವರೂ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

ಒಂದು ಬಾರಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಅಭ್ಯರ್ಥಿಯ ಮೇಲೆಯೇ ಮತದಾರರು ಒಲುವು ತೋರಿಸಿರುವುದು ಚುನಾವಣಾ ಫಲಿತಾಂಶ ನೋಡಿದಾಗ ಕಂಡು ಬರುತ್ತದೆ.

ದಾಖಲೆಯ ಅಂತರ: 1962ರ ಚುನಾವಣೆಯಲ್ಲಿ ಸರೋಜಿನಿ ಮಹಿಷಿ ಅವರು ಸಾಧಿಸಿದ್ದ 1,53,550 ಮತಗಳ ಅಂತರ ಇಂದಿಗೂ ಕ್ಷೇತ್ರದ ಹೆಚ್ಚು ಮತಗಳ ಅಂತರದ ಗೆಲುವಿನ ದಾಖಲೆಯಾಗಿದೆ.

ಸರೋಜಿನಿ ಮಹಿಷಿ ಅವರು 1,87,654 ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ವಿ.ವಿ. ಶಿವಳ್ಳಿ 34,104 ಮತಗಳನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.