ADVERTISEMENT

ಋಣ ಮುಕ್ತಕ್ಕೆ 2,300 ಅರ್ಜಿ ಸಲ್ಲಿಕೆ

ಧಾರವಾಡ ಜಿಲ್ಲೆ ಗ್ರಾಮೀಣ ಭಾಗಗಳಿಂದ ಹೆಚ್ಚು ಅರ್ಜಿ ಸಲ್ಲಿಕೆ

ನಾಗರಾಜ್ ಬಿ.ಎನ್‌.
Published 30 ಅಕ್ಟೋಬರ್ 2019, 19:30 IST
Last Updated 30 ಅಕ್ಟೋಬರ್ 2019, 19:30 IST

ಹುಬ್ಬಳ್ಳಿ: ಖಾಸಗಿ ಲೇವಾದೇವಿಗಾರರಿಂದ ಅಧಿಕ ಬಡ್ಡಿಗೆ ಸಾಲ ಪಡೆದು ಶೋಷಣೆಗೆ ಒಳಗಾಗಿರುವ ಧಾರವಾಡ ಜಿಲ್ಲೆಯ 2,300 ಜನರು ‘ಕರ್ನಾಟಕ ಋಣ ಪರಿಹಾರ ಕಾಯ್ದೆ’ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್‌, ಜೆಡಿಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿರುವ ಈ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್‌ 22ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು.

₹1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರರು ಖಾಸಗಿಯವರಿಂದ ಸಾಲ ಪಡೆದಿರುವ ದಾಖಲೆ, ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಅದರನ್ವಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ನವಲಗುಂದ, ಕುಂದಗೋಳ ಮತ್ತು ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಖಾಸಗಿ ಲೇವಾದೇವಿಗಾರರಿಂದ ಅಧಿಕ ಬಡ್ಡಿಗೆ ಸಾಲ ಪಡೆದವರು ಉಪ ವಿಭಾಗಾಧಿಕಾರಿ ಕಚೇರಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ.

ADVERTISEMENT

ನವಲಗುಂದ ಮತ್ತು ಧಾರವಾಡದ ಗ್ರಾಮೀಣ ಭಾಗಗಳಿಂದ 500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅಣ್ಣಿಗೇರಿಯಿಂದ 98 ಅರ್ಜಿಗಳು ಮಾತ್ರ ಬಂದಿವೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಹಾಗೂ ರೈತರಿಂದಲೇ ಅತಿ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ.

ಋಣಮುಕ್ತ ಕಾಯ್ದೆ ಜಾರಿಯಾಗಿ ಎರಡು ವಾರ ಕಳೆದರೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ, ಮಾರ್ಗಸೂಚಿಗಳು ಬಂದಿರಲಿಲ್ಲ. ಇದರಿಂದ ಉಪ ವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಪರದಾಡಿದ್ದರು. ಮಾಧ್ಯಮದಲ್ಲಿ ಬಂದಿರುವ ವರದಿ ನೋಡಿ ಕೆಲವರು ಆ ಸಂದರ್ಭದಲ್ಲಿಯೇ ತಮ್ಮನ್ನು ಋಣ ಮುಕ್ತಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.

‘ಅರ್ಜಿ ಸಲ್ಲಿಕೆಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ 2,300 ಅರ್ಜಿಗಳು ನಮಗೆ ಸಲ್ಲಿಕೆಯಾಗಿವೆ. ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ದಾಖಲೆಗಳು ಸರಿಯಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು’ ಎಂದು ಧಾರವಾಡ ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್ 'ಪ್ರಜಾವಾಣಿ'ಗೆ ತಿಳಿಸಿದರು.

‘ಎಲ್ಲ ತಹಶೀಲ್ದಾರ್‌ ಕಚೇರಿಗಳಲ್ಲಿಯೂ ಋಣ ಮುಕ್ತ ಕಾಯ್ದೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತು. ಸೂಚನಾ ಫಲಕಗಳಲ್ಲೂ ಸಂಪೂರ್ಣ ಮಾಹಿತಿ ಅಂಟಿಸಲಾಗಿತ್ತು. ಬಡ್ಡಿಗೆ ಸಾಲ ಪಡೆದ ರೈತರು, ಕಾರ್ಮಿಕರು ಜಾಗೃತರಾಗಿ ಇದರ ಪ್ರಯೋಜನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.