ADVERTISEMENT

ಹುಬ್ಬಳ್ಳಿ ಮತಾಂತರ ಯತ್ನ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:58 IST
Last Updated 26 ಸೆಪ್ಟೆಂಬರ್ 2022, 4:58 IST
   

ಹುಬ್ಬಳ್ಳಿ: ಬಲವಂತದಿಂದ ಮರ್ಮಾಂಗದ ಮುಂದೊಗಲು ಕತ್ತರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಕುರಿತು ಇಲ್ಲಿನ ನವನಗರ ಪೊಲೀಸ್‌ ಠಾಣೆಯಿಂದ ದಾಖಲಾದ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.

ಈ ನಿಟ್ಟಿನಲ್ಲಿ ಹು–ಧಾ ಪೊಲೀಸ್‌ ಕಮಿಷನರೇಟ್‌ ಸಿದ್ಧತೆ ಮಾಡಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ನಡುವೆ ಪ್ರಕರಣ ದಾಖಲಿಸಿರುವ ಶ್ರೀಧರ ಅಲಿಯಾಸ್ ಸಲ್ಮಾನ್‌ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶ್ರೀಧರ ಅವರನ್ನು ಬಲವಂತವಾಗಿ ಮತಾಂತರ ಮಾಡಿರುವುದು ಬೆಂಗಳೂರಿನಲ್ಲಿ. ಈ ಹಿನ್ನೆಲೆಯಲ್ಲಿ ಅಲ್ಲಿನ ಬನಶಂಕರಿ ಪೊಲೀಸ್‌ ಠಾಣೆಗೆ ಪ್ರಕರಣ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಪ್ರಕರಣದಕ್ಕೆ ಸಂಬಂಧಿಸಿ ಎಸಿಪಿ ನೇತೃತ್ವದ ತಂಡವೊಂದು ಬೆಂಗಳೂರಿಗೆ ತೆರಳಿ, ಕೆಲವಷ್ಟು ಮಾಹಿತಿ ಸಂಗ್ರಹಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ವಿಡಿಯೊ ವೈರಲ್: ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಶ್ರೀಧರ, ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಹೇಗೆಲ್ಲ ಆಮಿಷ ಒಡ್ಡಿದ್ದರು, ಯಾವ ರೀತಿ ಮನಸ್ಸು ಪರಿವರ್ತಿಸಿದರು, ಎಷ್ಟೆಲ್ಲ ಹಿಂಸೆ ನೀಡಿದ್ದರು, ಹೇಗೆ ಹುಬ್ಬಳ್ಳಿಗೆ ಬಂದೆ ಎನ್ನುವ ಕುರಿತು ಮಾತನಾಡಿದ್ದಾರೆ. ಆದರೆ, ಎಲ್ಲಿಂದ ವಿಡಿಯೊ ಮಾಡಿ ಕಳುಹಿಸಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

‘ಯುವತಿಯನ್ನು ಮತಾಂತರ ಮಾಡುವ ಜವಾಬ್ದಾರಿ ನನಗೆ ನೀಡಿದ್ದು, ಅದಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದೆ. ಯುವತಿಯ ಮಾಹಿತಿಯನ್ನು ನನಗೆ ಮೇಲ್‌ನಲ್ಲಿ ಕಳುಹಿಸಿ, ₹5 ಸಾವಿರ ನೀಡಿದ್ದರು. ಯುವತಿಯ ವಿಳಾಸ ಹುಡುಕುವ ಸಂದರ್ಭದಲ್ಲಿ ಸ್ಥಳೀಯರು ನನ್ನ ಪತ್ತೆ ಹಚ್ಚಿದ್ದಾರೆ’ ಎಂದು ಶ್ರೀಧರ ವಿಡಿಯೊದಲ್ಲಿ ಹೇಳಿದ್ದಾರೆ.

ದಾಖಲಾದ ಎಫ್‌ಐಆರ್‌ನಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಅವರ‍್ಯಾರು? ಶ್ರೀಧರ ಮತಾಂತರಗೊಳಿಸಲು ಬಂದಿರುವ ವಿಷಯ ಅವರಿಗೆ ತಿಳಿದಿತ್ತಾ? ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಕಳವು: ಇಲ್ಲಿನ ಗಂಗಾಧರ ನಗರದ ಸೆಟ್ಲಮೆಂಟ್‌ ನಿವಾಸಿ ಮಲ್ಲಮ್ಮ ಬಿಜವಾಡ ಅವರ ಮನೆಯ ಬಾಗಿಲು ಮುರಿದು, ₹64 ಸಾವಿರ ಮೌಲ್ಯದ ಚಿನ್ನಾಭರಣ, ₹10 ಸಾವಿರ ನಗದು ಹಾಗೂ 48 ಸಾವಿರ ಮೌಲ್ಯದ ಗಡಿಯಾರ ಕಳವು ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.