ADVERTISEMENT

ಕಾಂಗ್ರೆಸ್‌ನಿಂದ ಮೋದಿ ಪ್ರತಿಕೃತಿ ಶವಯಾತ್ರೆ

ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 16:02 IST
Last Updated 8 ನವೆಂಬರ್ 2018, 16:02 IST
ನೋಟು ಅಮಾನ್ಯ ಮಾಡುವ ಮೂಲಕ ದೇಶವನ್ನು ದಿವಾಳಿಯತ್ತ ಕೊಂಡೊಯ್ದರು ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ  ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ
ನೋಟು ಅಮಾನ್ಯ ಮಾಡುವ ಮೂಲಕ ದೇಶವನ್ನು ದಿವಾಳಿಯತ್ತ ಕೊಂಡೊಯ್ದರು ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ  ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣದ ಮೂಲಕ ಜನಸಾಮಾನ್ಯರ ಬದುಕನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಯುವ ಕಾಂಗ್ರೆಸ್‌ ಸದಸ್ಯರು ನಗರದಲ್ಲಿ ಗುರುವಾರ ಮೋದಿ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿದರು.

ನೋಟು ಅಮಾನ್ಯದ ನಿರ್ಧಾರ ಕೈಗೊಂಡು ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿಂದ ಚೆನ್ನಮ್ಮ ವೃತ್ತದವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯ ಶವಯಾತ್ರೆ ನಡೆಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಮಾತನಾಡಿ, ‘ಸಚಿವ ಸಂಪುಟದ ಸದಸ್ಯರು, ಆರ್ಥಿಕ ತಜ್ಞರನ್ನು ಸಂಪರ್ಕಿಸದೇ ನೋಟು ಅಮಾನ್ಯದಂತಹ ಅಪಾಯಕಾರಿ ನಿರ್ಧಾರ ಕೈಗೊಂಡ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸಿದರು. 50 ದಿನಗಳ ಬಳಿಕ ಈ ನಿರ್ಧಾರ ತಪ್ಪು ಎಂದು ಸಾಬೀತಾದರೆ ನನ್ನನ್ನು ಬೆಂಕಿಗೆ ಹಾಕಬಹುದು ಎಂದು ಭಾವುಕರಾಗಿ ಹೇಳಿದ್ದರು. ನಿರೀಕ್ಷೆಯಂತೆ ಈ ನಿರ್ಧಾರದಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕಾರ್ಖಾನೆಗಳು ಮುಚ್ಚಿ ಹೋಗಿವೆ. ಅವರದೇ ಪಕ್ಷದ ಹಿರಿಯ ನಾಯಕರು ಈ ನಿರ್ಧಾರ ತಪ್ಪು ಎಂದಿದ್ದಾರೆ. ಈಗಲಾದರೂ ಮೋದಿ ಅವರು ಜನತಾ ನ್ಯಾಯಾಲಯದ ಎದುರು ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ರಾಜ್ಯ ಎಸ್.ಸಿ. ಘಟಕದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ. ಮಾಜಿ ಸಂಸದ ಐ.ಜಿ.ಸನದಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ,ಬ್ಲಾಕ್ ಅಧ್ಯಕ್ಷರಾದ ಬಸವರಾಜ ಮಲಕಾರಿ, ಅಬ್ದುಲ್ ಗನಿ ವಲಿಅಹ್ಮದ್,ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಸ್ವಾತಿ ಮಳಗಿ, ಜಯಲಕ್ಷ್ಮೀ ದೊಡ್ಡಮನಿ, ಪುಷ್ಪಾ ಅರಳಿಕಟ್ಟಿ, ಶೈನಾಜ್ ಮಾಯಕವಾಡಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.