ADVERTISEMENT

ಅಶ್ಲೀಲ ಸಂದೇಶ, ಆರೋಪಿ ಬಂಧನ

ಯುವತಿಯರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ಡೆಲಿವರಿ ಬಾಯ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:56 IST
Last Updated 24 ಜೂನ್ 2025, 16:56 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹುಬ್ಬಳ್ಳಿ: ಆನ್‌ಲೈನ್‌ ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳನ್ನು ತಲುಪಿಸಲು ಮನೆಗೆ ಬರುವ ‘ಡೆಲಿವರಿ ಬಾಯ್‌’ಗಳು ಯುವತಿಯರ ಮೊಬೈಲ್‌ ನಂಬರ್‌ಗಳಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿರುವ ಪ್ರಕರಣ ನಗರದಲ್ಲಿ ಪತ್ತೆಯಾಗುತ್ತಿದೆ.

ADVERTISEMENT

ಇದಕ್ಕೆ ಸಂಬಂಧಿಸಿ ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ ಒಂದೇ ವ್ಯಕ್ತಿಯ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ. ಆರೋಪಿಯನ್ನು ಬಂಧಿಸಿದ್ದಾರೆ.

ಮೀಶೋ ಆ್ಯಪ್‌ ಮುಖಾಂತರ ನಗರದ ಯುವತಿಯೊಬ್ಬರು ವಸ್ತುವೊಂದನ್ನು ಖರೀದಿಸಿದ್ದರು. ನಾಲ್ಕು–ಐದು ದಿನಗಳ ಹಿಂದೆ ಡೆಲಿವರಿ ಬಾಯ್‌ ರಮೇಶ ರಡ್ಡಿ, ಅದನ್ನು ಯುವತಿ ಮನೆಗೆ ತೆರಳಿ ತಲುಪಿಸಿದ್ದ. ಆನ್‌ಲೈನ್‌ನಲ್ಲಿ ವಸ್ತು ಖರೀದಿಸುವಾಗ ನಮೂದಿಸಿದ್ದ ನಂಬರ್‌ ಅನ್ನು ರಮೇಶ, ತನ್ನ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಿದ್ದ. ಅವರಿಗೆ ಅವಾಚ್ಯವಾಗಿ ಸಂದೇಶ ಕಳುಹಿಸಿ, ಮಾನಸಿಕ ಕಿರುಕುಳ ನೀಡಿದ್ದ. ಈ ಕುರಿತು ಮಹಿಳೆ ಪ್ರಕರಣ ದಾಖಲಿಸಿದ್ದರು.

ಅಕ್ಷಯ ಪಾರ್ಕ್‌ನ ವೈದ್ಯೆ ಒಬ್ಬರು ಟ್ರೂ ಮೆಡ್ಸ್‌ ವೆಬ್‌ಸೈಟ್‌ನಲ್ಲಿ ಔಷಧಿ ಖರೀದಿಸಿದ್ದರು. ಅದನ್ನು ಡೆಲಿವರಿ ಮಾಡುವ ಸಂದರ್ಭ, ಇದೇ ರಮೇಶ ರಡ್ಡಿ ವೈದ್ಯೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಎರಡು ದಿನ ಬಿಟ್ಟು, ಅವರ ಮೊಬೈಲ್‌ ನಂಬರ್‌ಗೆ ಅಸಭ್ಯವಾಗಿ ಸಂದೇಶ ಕಳುಹಿಸಿದ್ದ. ಪ್ರಕರಣ ದಾಖಲಾಗಿತ್ತು.

‘ಡೆಲಿವರಿ ಬಾಯ್‌ ಮದ್ಯವ್ಯಸನಿಯಾಗಿದ್ದು, ಮದ್ಯ ಸೇವಿಸಿದ ಸಂದರ್ಭ ಮಹಿಳೆಯರಿಗೆ ಮೆಸೆಜ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ವಿಚಾರಣೆ ನಡೆಯುತ್ತಿದೆ. ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಬರುವ ಸಂದೇಶಗಳಿಗೆ ಯಾರೂ ಪ್ರತಿಕ್ರಿಯಿಸಬಾರದು. ಈಗಾಗಲೇ ಡೆಲಿವರಿ ಬಾಯ್‌ಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಶೀಘ್ರ ಮತ್ತೊಮ್ಮೆ ಸಭೆ ನಡೆಸಿ ಎಚ್ಚರಿಕೆ ನೀಡಲಾಗುವುದು’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.

ಚಿನ್ನಾಭರಣ ಕಳವು: ನಗರದ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್‌ನಿಂದ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಹತ್ತುವ ವೇಳೆ, ಗದುಗಿನ ಅನ್ನಪೂರ್ಣಾ ಅಡರಕಟ್ಟೆ ಅವರ ಬ್ಯಾಗ್‌ನಲ್ಲಿದ್ದ ₹4.08 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.