ADVERTISEMENT

ಶಾಸನಸಭೆ ಕ್ರಿಯಾಶೀಲವಾಗಲಿ: ಬಸವರಾಜ ಹೊರಟ್ಟಿ

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಶಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 16:16 IST
Last Updated 16 ಜೂನ್ 2023, 16:16 IST
ಮುಂಬೈನ ಜಿಯೋವರ್ಲ್ಡ್ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ರಾಷ್ಟೀಯ ಶಾಸಕರ ಸಮ್ಮೇಳನದ ವಿಶೇಷ ಗೋಷ್ಠಿಯಲ್ಲಿ  ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಂಡರು
ಮುಂಬೈನ ಜಿಯೋವರ್ಲ್ಡ್ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ರಾಷ್ಟೀಯ ಶಾಸಕರ ಸಮ್ಮೇಳನದ ವಿಶೇಷ ಗೋಷ್ಠಿಯಲ್ಲಿ  ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಂಡರು   

ಹುಬ್ಬಳ್ಳಿ: ‘ಪ್ರಜಾಪ್ರಭುತ್ವದ ಆಶಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂವಿಧಾನಬದ್ಧ ಶಾಸನಸಭೆಗಳ ಪಾತ್ರ ಮಹತ್ವದಾಗಿದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಮುಂಬೈನ ಜಿಯೋವರ್ಲ್ಡ್ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ರಾಷ್ಟೀಯ ಶಾಸಕರ ಸಮ್ಮೇಳನದ ವಿಶೇಷ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘75 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಶಾಸನಸಭೆಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಮಾತಿನ ಮಂಟಪ ಸೃಷ್ಟಿಸುವ ವೇದಿಕೆಗಳಾಗದೆ, ಜನರ ಬದುಕು, ಬವಣೆ ಹಾಗೂ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದರು.

ADVERTISEMENT

‘ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಸವಲತ್ತುಗಳನ್ನು ಸಾಮಾನ್ಯ ಜನತೆಗೆ ತಲುಪಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ತಮ್ಮನ್ನು ಆರಿಸಿ ಕಳುಹಿಸಿದ ಮತದಾರರ ಆಶಯಗಳಿಗೆ ಅನುಗುಣವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು. ಪಕ್ಷಬೇಧ ತೊರೆದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ’ ಎಂದು ತಿಳಿಸಿದರು.

ಸಮ್ಮೇಳನದ ಉದ್ಛಾಟನಾ ಸಮಾರಂಭದಲ್ಲಿ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ, ಮಹಾರಾಷ್ಟದ ಉಪಮುಖ್ಯಮಂತ್ರಿ ದೇವೇಂದ್ರ  ಫಡಣವೀಸ್, ಸುಮಿತ್ರಾ ಮಹಾಜನ್, ಮೀರಾ ಕುಮಾರ್, ಶಿವರಾಜ್ ಪಾಟೀಲ್, ಮನೋಹರ್ ಜೋಷಿ, ಕರ್ನಾಟಕದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೇರಿದಂತೆ ಎಲ್ಲಾ ರಾಜ್ಯಗಳ ವಿಧಾನಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಾಗೂ 2,200 ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.