ADVERTISEMENT

ಹುಬ್ಬಳ್ಳಿ: ಮನೆ ಬಾಗಿಲಿಗೆ ಜನನ–ಮರಣ ಪ್ರಮಾಣಪತ್ರ

ಕಚೇರಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಪಾಲಿಕೆಯಿಂದ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:37 IST
Last Updated 9 ಫೆಬ್ರುವರಿ 2023, 6:37 IST
ಡಾ.‍ ಶ್ರೀಧರ ದಂಡಪ್ಪನವರ
ಡಾ.‍ ಶ್ರೀಧರ ದಂಡಪ್ಪನವರ   

ಹುಬ್ಬಳ್ಳಿ: ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಅವಳಿನಗರದ ಜನರು ಇನ್ನು ಕಚೇರಿಗಳಿಗೆ ಅಲೆದಾಡಿ ಹೈರಾಣಾಗಬೇಕಿಲ್ಲ. ಪ್ರಮಾಣಪತ್ರಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಹೊಸ ಯೋಜನೆಯ ಜಾರಿಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಸದ್ಯ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದರೆ, ಅಲ್ಲಿಯೇ ಜನನ ಪ್ರಮಾಣಪತ್ರ ಸಿಗುತ್ತಿದೆ. ಇಲ್ಲದಿದ್ದರೆ, ಪಾಲಿಕೆಯ ವಲಯ ಕಚೇರಿ ಅಥವಾ ಕೇಂದ್ರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕು. ಮರಣ ಪ್ರಮಾಣಪತ್ರಕ್ಕೂ ಇದೇ ಮಾರ್ಗ. ಅಗತ್ಯ ದಾಖಲೆ ಸಲ್ಲಿಸಿದರೂ, ಸರ್ವರ್ ಡೌನ್ ನೆಪ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪ್ರಮಾಣಪತ್ರ ಜನರ ಕೈ ಸೇರುವುದು ವಿಳಂಬವಾಗುವುದು ಸಾಮಾನ್ಯ. ಇದರ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದರು. ಮುಂದೆ ಇವುಗಳಿಗೆ ಕಡಿವಾಣ ಬೀಳಲಿದೆ.

ಅಂಚೆ ಕಚೇರಿ ಸಾಥ್: ‘ವಿಳಂಬವಿಲ್ಲದೆ ಜನರಿಗೆ ಪ್ರಮಾಣಪತ್ರಗಳನ್ನು ತಲುಪಿಸುವ ಈ ಯೋಜನೆಯನ್ನು ಅಂಚೆ ಕಚೇರಿ ಸಹಕಾರದೊಂದಿಗೆ ಜಾರಿಗೆ ತರಲಾಗುತ್ತಿದೆ. ಪ್ರಮಾಣಪತ್ರಕ್ಕಾಗಿ ವಲಯ ಕಚೇರಿಗೆ ನಿಗದಿತ ಅರ್ಜಿಯೊಂದಿಗೆ ಜನನದ ಮಾಹಿತಿ, ದಾಖಲೆ ಹಾಗೂ ಮನೆ ವಿಳಾಸವನ್ನು ಒದಗಿಸಿ ₹20 ಸೇವಾ ಶುಲ್ಕ ಪಾವತಿಸಬೇಕು’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಚೇರಿ ಸಿಬ್ಬಂದಿ ಅರ್ಜಿಯನ್ನು ಪರಿಶೀಲಿಸಿ, ಪ್ರಮಾಣಪತ್ರವನ್ನು ಮುದ್ರಿಸಲಿದ್ದಾರೆ. ನಂತರ, ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಲಕೋಟೆಗೆ ಹಾಕಿ ಅರ್ಜಿದಾರರ ವಿಳಾಸ ನಮೂದಿಸಲಿದ್ದಾರೆ. ಈ ಪ್ರಕ್ರಿಯೆಗೆ ಎರಡು ದಿನ ಬೇಕಾಗುತ್ತದೆ. ಕಚೇರಿಗೆ ನಿತ್ಯ ಭೇಟಿ ನೀಡುವ ಇಲಾಖೆ ಸಿಬ್ಬಂದಿ ಲಕೋಟೆಯನ್ನು ಪಡೆದುಕೊಂಡು ಅರ್ಜಿದಾರರಿಗೆ ತಲುಪಿಸುತ್ತಾರೆ. ಅರ್ಜಿದಾರರು ಅಂಚೆ ಶುಲ್ಕವಾಗಿ ಸಿಬ್ಬಂದಿಗೆ ₹80 ಪಾವತಿಸಬೇಕು. ಜನನ ಪ್ರಮಾಣಪತ್ರ ಮನೆಗೆ ತಲುಪಲು 1–2 ದಿನ ಹಾಗೂ ಮರಣ ಪ್ರಮಾಣಪತ್ರಕ್ಕೆ ಮೂರು ದಿನ ಬೇಕಾಗುತ್ತದೆ’ ಎಂದು ಹೇಳಿದರು.

ಪಾಲಿಕೆ ಕಚೇರಿಯಿಂದ ಅರ್ಜಿದಾರರಿಗೆ ಪ್ರಮಾಣಪತ್ರ ರವಾನೆಯಾದ ದಿನದಿಂದ ಮನೆಗೆ ತಲುಪುವವರೆಗೆ, ಎಸ್‌ಎಂಎಸ್‌ನಲ್ಲಿ ಮಾಹಿತಿ ಸಿಗಲಿದೆ. ಅಂಚೆ ಇಲಾಖೆಯ ವೆಬ್‌ಸೈಟ್‌ನಲ್ಲಿ (www.indiapost.gov.in) ಪ್ರಮಾಣಪತ್ರ ಎಲ್ಲಿದೆ ಎಂಬುದನ್ನು ಸಹ ಟ್ರ್ಯಾಕ್ ಮಾಡಬಹುದಾಗಿದೆ.

‘ದೇಶದ ಯಾವ ಮೂಲೆಯಲ್ಲಿದ್ದರೂ ಲಭ್ಯ’

‘ಕಚೇರಿಗೆ ಒಮ್ಮೆ ಭೇಟಿ ನೀಡಿ, ಅರ್ಜಿಯೊಂದಿಗೆ ಅಗತ್ಯ ದಾಖಲೆ ಸಲ್ಲಿಸಿ ₹100 ಪಾವತಿಸಿದರೆ ಮನೆ ಬಾಗಿಲಲ್ಲೇ ಜನನ ಮತ್ತು ಮರಣ ಪ್ರಮಾಣಪತ್ರ ಕೈ ಸೇರುವ ಈ ಯೋಜನೆ ಪಾರದರ್ಶಕವಾಗಿದೆ. ಅವಳಿನಗರದ ವಾಸಿಗಳಷ್ಟೇ ಅಲ್ಲದೆ, ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಇಲ್ಲಿನ ನಾಗರಿಕರು ಈ ಸೌಲಭ್ಯ ಪಡೆಯಬಹುದು. ಪ್ರಮಾಣಪತ್ರವನ್ನು ಅರ್ಜಿದಾರರು ಸ್ವೀಕರಿಸಲು ಸಾಧ್ಯವಾಗದಿದ್ದರೆ, ಅವರ ಕುಟುಂಬದ ಸದಸ್ಯರು ಸಹ ಸ್ವೀಕರಿಸಬಹುದು. ಉದ್ದೇಶಿತ ಯೋಜನೆ ಫೆ. 15ರಿಂದ ಜಾರಿಗೆ ಬರಲಿದೆ’ ಎಂದು ಡಾ. ಶ್ರೀಧರ ದಂಡಪ್ಪನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.