ADVERTISEMENT

60 ವರ್ಷದ ಬಳಿಕ ಮರಳಿ ಅರಳುವ ಕಾಲ

ಹಿರಿಯ ನಾಗರಿಕರ ಮಿಲನ ಕಾರ್ಯಕ್ರಮದಲ್ಲಿ ಸು. ರಾಮಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 14:39 IST
Last Updated 1 ನವೆಂಬರ್ 2019, 14:39 IST
ಹಿರಿಯನಾಗರಿಕರ ಮಿಲನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಮಾತನಾಡಿದರು
ಹಿರಿಯನಾಗರಿಕರ ಮಿಲನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಮಾತನಾಡಿದರು   

ಹುಬ್ಬಳ್ಳಿ: ’ಹಿರಿಯರು 60 ವರ್ಷದ ನಂತರ ಅರಳು ಮರುಳಾಗುವುದಿಲ್ಲ.ಅದು ಮರಳಿ ಅರಳುವ ಕಾಲ. ಶರೀರಕ್ಕೆ ಮುಪ್ಪಾಗುತ್ತದೆ ಹೊರತು, ಮನಸ್ಸಿಗಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು.

ಸರಸ್ವತಿ ಸದನದಲ್ಲಿ ಸೇವಾ ಭಾರತಿ ಟ್ರಸ್ಟ್‌ ಶುಕ್ರವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಮಿಲನ ‘ಸಮಾಜಕ್ಕಾಗಿ ಹಿರಿಯರ ಮಾರ್ಗದರ್ಶನ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಭಗವಂತ ಕೊಟ್ಟಿರುವುದು 120 ವರ್ಷ ಆಯಸ್ಸು.ಆದರೆ, ಎಲ್ಲರೂ ಅಷ್ಟು ವರ್ಷ ಬದುಕಲು ಸಾಧ್ಯವಿಲ್ಲ. ಇರುವಷ್ಟು ದಿನ ಸುಖವಾಗಿ ಬದುಕಬೇಕು. ಹಿರಿಯ ನಾಗರಿಕರು ಸದಾ ಕ್ರಿಯಾಶೀಲವಾಗಿರಬೇಕು’ ಎಂದರು.

‘ವಯಸ್ಸಾದ ನಂತರವೂ ಉತ್ತಮ ಆರೋಗ್ಯ ಹೊಂದಲುಸೂರ್ಯೋದಯಕ್ಕಿಂತ ಮುಂಚೆ ಏಳಬೇಕು. ರಾತ್ರಿ ಅನಾವಶ್ಯಕವಾಗಿ ತಡವಾಗಿ ಮಲಗಬಾರದು. ಮಲಗುವ ಮುನ್ನ ಒಳ್ಳೆಯದನ್ನೆ ಯೋಚಿಸಬೇಕು.ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ’ ಎಂದರು.

ADVERTISEMENT

‘ವಯಸ್ಸಾಯ್ತು ನನ್ನಿಂದ ಏನು ತಾನೆ ಮಾಡಲು ಸಾಧ್ಯ? ಎನ್ನುವ ಬದಲು ಏನನ್ನಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಕೆಲಸಗಳನ್ನು ನೀವೆ ಮಾಡಿಕೊಳ್ಳಿ. ಸಮಯ ಸಿಕ್ಕಾಗ ನೀವಿರುವ ಓಣಿ, ಬಡಾವಣೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಇಲ್ಲವೇ ಸೇವಾ ಸದನದಲ್ಲಿ ಬಂದು ಮಕ್ಕಳಿಗೆ ಪಾಠ ಹೇಳಿಕೊಡಿ’ ಎಂದರು.

ಕನ್ನಡ ಭಾಷೆಗಾಗಿ ಸಂಕಲ್ಪ:ಕನ್ನಡ ಭಾಷೆಯನ್ನುಬೆಳೆಸಬೇಕದಾರೆ ಭಾಷೆಯನ್ನು ಹೆಚ್ಚು ಬಳಸಬೇಕು. ಇದು ಸರ್ಕಾರ ಮಾಡುವಂತಹ ಕೆಲಸವಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ರಾಮಣ್ಣ ಅಭಿಪ್ರಾಯಪಟ್ಟರು.

‘ಆಂಗ್ಲ ಭಾಷೆ ವ್ಯಾಮೋಹದಿಂದಾಗಿ ಕನ್ನಡ ಕಂಗ್ಲಿಷ್‌, ಕೊಂಕಣಿ–ಕೊಂಗ್ಲಿಷ್‌ ಮತ್ತು ಮರಾಠಿ–ಮಂಗ್ಲಿಷ್‌ ಆಗುತ್ತಿದೆ. ಹಿರಿಯರು ಕೂಡ ಮನೆಯಲ್ಲಿ ಮೊಮ್ಮಕ್ಕಳೊಟ್ಟಿಗೆ ಕನ್ನಡದಲ್ಲೆ ಮಾತನಾಡಿ. ಮುಂದೆ ಅವರೆ ನಮ್ಮ ಸಂಸ್ಕೃತಿ, ಭಾಷೆಯನ್ನು ಬೆಳೆಸಬೇಕಾದ ಅವರೆ ಕನ್ನಡ ಕಡೆಗಣಿಸಿದರೆ ಕನ್ನಡ ಉಳಿಯುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.

ನಿವೃತ್ತ ಬ್ಯಾಂಕ್‌ ಅಧಿಕಾರಿ ಶ್ಯಾಮಸುಂದರ್ ಕುಲಕರ್ಣಿ, ಕೋಶಾಧ್ಯಕ್ಷ ಕೃಷ್ಣಾ ಕುಲಕರ್ಣಿ, ಸುಧೀರ ಪರ್ವತಿಕರ್‌, ಚಂದ್ರಶೇಖರ ಗೋಕಾಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.