ADVERTISEMENT

ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 13:21 IST
Last Updated 29 ಆಗಸ್ಟ್ 2021, 13:21 IST
 ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ  ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಧ್ಜಜಕ್ಕೆ ಇಸ್ತ್ರಿ ಹಾಕಿದರು
 ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ  ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಧ್ಜಜಕ್ಕೆ ಇಸ್ತ್ರಿ ಹಾಕಿದರು   

ಹುಬ್ಬಳ್ಳಿ: ನಗರದ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿದರು.

ರಾಷ್ಟ್ರಧ್ವಜ ತಯಾರಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ರಾಷ್ಟ್ರಧ್ವಜಕ್ಕೆ ಸ್ವತಃ ಇಸ್ತ್ರಿ ಮಾಡುವ ಮೂಲಕ ಆ ಪ್ರಕ್ರಿಯೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು. ಜತೆಗೆ ಅಲ್ಲಿನ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಪೂರ್ಣ ಅವಧಿ ಕೆಲಸ ಸಿಗುತ್ತಿಲ್ಲ, ಇದರಿಂದ ಜೀವನ ನಿರ್ವಹಣೆ ತೊಂದರೆ ಆಗಿದೆ ಎಂದು ಸಂಸ್ಥೆಯ ಉತ್ಪಾದನಾ, ಮಾರಾಟ ಮಳಿಗೆ ಸಿಬ್ಬಂದಿ ಅಳಲು ತೋಡಿಕೊಂಡರು. ಸಾಂಪ್ರದಾಯಿಕ ವೃತ್ತಿನಿರತರಿಗೆ ನೀಡಿರುವ ಪರಿಹಾರವನ್ನು ತಮಗೂ ಕೊಡಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿಕೊಂಡರು.

ADVERTISEMENT

ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯು ಬಾಕಿ ಅನುದಾನ ಬಿಡುಗಡೆ ಮಾಡದ ಕಾರಣ ಆಗಿರುವ ಅನಾನುಕೂಲದ ಬಗ್ಗೆ ಸಂಸ್ಥೆಯ ಮೇಲ್ವಿಚಾರಕರು ಹೇಳಿಕೊಂಡರು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಿವಕುಮಾರ್ ಅವರು ಭರವಸೆ ನೀಡಿದರು.

‘ಭಾರತದ ಉನ್ನತ ಪರಂಪರೆಯ ಭಾಗವಾಗಿರುವ ಈ ಸಂಸ್ಥೆಗೆ ಭೇಟಿ ನೀಡಿದ್ದು ತಮಗೆ ಹೆಮ್ಮೆ ತಂದಿದೆ. ಇಲ್ಲಿನ ಸಿಬ್ಬಂದಿಯ ದೇಶಸೇವೆ ಸ್ತುತ್ಯಾರ್ಹ. ಅವರ ಸೇವೆಗೆ ನಮಿಸುತ್ತೇನೆ’ ಎಂದು ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರದಲ್ಲಿ ಶಿವಕುಮಾರ್ ಬರೆದರು.

ಸಂಸದ ಕುಲ್‌ದೀಪ್ ರಾಯ್ ಶರ್ಮಾ, ಶಾಸಕ ಪ್ರಸಾದ್ ಅಬ್ಬಯ್ಯ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ಶರಣಪ್ಪ ಕೋಟಗಿ, ಸದಾನಂದ ಡಂಗನವರ ಜತೆಗಿದ್ದರು.

ಇದಕ್ಕೂ ಮೊದಲು ಸಿದ್ಧಾರೂಢ ಮಠ, ಹುಬ್ಬಳ್ಳಿಯ ಹಜರತ್ ಸಯ್ಯದ್ ಫತೇಶಾ ವಲಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.