ADVERTISEMENT

ಎಚ್‌ಸಿಎ ತಂಡಕ್ಕೆ ‘ವಿಜಯದಶಮಿ’

16 ವರ್ಷದ ಒಳಗಿನವರ ಕ್ರಿಕೆಟ್‌: ಬಿಡಿಕೆ ರನ್ನರ್ಸ್‌ ಅಪ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 3:01 IST
Last Updated 16 ಅಕ್ಟೋಬರ್ 2021, 3:01 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡದ ಜೊತೆಗೆ ಸಿಬ್ಬಂದಿ ಹಾಗೂ ಅತಿಥಿಗಳು ಇದ್ದಾರೆ
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡದ ಜೊತೆಗೆ ಸಿಬ್ಬಂದಿ ಹಾಗೂ ಅತಿಥಿಗಳು ಇದ್ದಾರೆ   

ಹುಬ್ಬಳ್ಳಿ: ಅನ್ಮೋಲ್‌ ಪಿ. (ಅಜೇಯ 81) ಮತ್ತು ಸಾಹಿಲ್‌ ಎಸ್‌. (65) ಆರಂಭಿಕ ಜೋಡಿಯ ಉತ್ತಮ ಬ್ಯಾಟಿಂಗ್‌ ಬಲದಿಂದಾಗಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಆಯೋಜಿಸಿದ್ದ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ವಿಜಯದಶಮಿ ದಿನವಾದ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹಬ್ಬದ ಖುಷಿಯ ಜೊತೆಗೆ ಟ್ರೋಫಿ ಗೆದ್ದ ಸಂಭ್ರಮವನ್ನೂ ಎಚ್‌ಸಿಎ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ 50 ಓವರ್‌ಗಳಲ್ಲಿ 172 ರನ್‌ ಗಳಿಸಿ ಆಲೌಟ್‌ ಆಯಿತು. ಈ ತಂಡದ ಅಮನ್‌ ಜೆ. (60) ಅರ್ಧಶತಕ ಕಲೆಹಾಕಿ ತಂಡಕ್ಕೆ ಆಸರೆಯಾದರು.

ADVERTISEMENT

ಈ ಗುರಿಯನ್ನು ಎಚ್‌ಸಿಎ ತಂಡ 35.4 ಓವರ್‌ಗಳಲ್ಲಿ ತಲುಪಿ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತು. ಆರಂಭಿಕ ಜೋಡಿ ಕಟ್ಟಿಕೊಟ್ಟ ಗಟ್ಟಿಬುನಾದಿಯ ಮೇಲೆ ಆದಿತ್ಯ ಯು. (11) ಮತ್ತು ಮಣಿಕಂಠ ಎಸ್‌.ಬಿ. (ಅಜೇಯ 8) ಗೆಲುವಿನ ಸೌಧ ಕಟ್ಟಿಕೊಟ್ಟರು. ಈ ತಂಡದ ಆದಿತ್ಯ ಖಿಲಾರೆ (ಮೂರು) ಮತ್ತು ವಿನಾಯಕ ಪಾಂಡೆ (ಎರಡು) ವಿಕೆಟ್‌ಗಳನ್ನು ಕಬಳಿಸಿ ಬೌಲಿಂಗ್‌ನಲ್ಲಿ ಮಿಂಚಿದರು.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಎಚ್‌ಸಿಎ ತಂಡ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ಮೇಲೂ, ಬಿಡಿಕೆ ತಂಡ ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದವು.

ಅನ್ಮೋಲ್‌ ಪಗಾಡ್‌ (ಉತ್ತಮ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್), ಆದಿತ್ಯ ಖಿಲಾರೆ (ಉತ್ತಮ ಬೌಲರ್‌), ವೀರಜ್ ಹಾವೇರಿ (ಟೂರ್ನಿ ಶ್ರೇಷ್ಠ), ಆಯುಷ್‌ ಪಟೇಲ (ಉತ್ತಮ ಉದಯೋನ್ಮುಖ ಬ್ಯಾಟ್ಸ್‌ಮನ್), ಸಂಕೇತ್ ಶೆಟ್ಟಿ (ಉತ್ತಮ ಉದಯೋನ್ಮುಖ ಬೌಲರ್‌), ತನಿಷಾ ಕಾಮತ್‌ (ಉತ್ತಮ ಉದಯೋನ್ಮುಖ ಆಟಗಾರ್ತಿ) ಮತ್ತು ಜೋಹಿಯಾ ಲೊಂಡೆವಾಲೆ (ಉತ್ತಮ ಸಕ್ರಿಯ ಆಟಗಾರ್ತಿ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.