ADVERTISEMENT

‘ಸಮ್ಮೇಳನ ಮುಗಿದ ಮೇಲೆ ನೋಡದರಾಯಿತು‘

ಆಟೊರಿಕ್ಷಾಗಳಿಗೆ ಮೀಟರ್ ಕಡ್ಡಾಯಕ್ಕೆ ಚಾಲಕರ ಪ್ರತಿಕ್ರಿಯೆ

ಶಿವಕುಮಾರ ಹಳ್ಯಾಳ
Published 2 ಜನವರಿ 2019, 20:16 IST
Last Updated 2 ಜನವರಿ 2019, 20:16 IST
ಆಟೋ ಮೀಟರ್‌ (ಸಾಂದರ್ಭಿಕ ಚಿತ್ರ)
ಆಟೋ ಮೀಟರ್‌ (ಸಾಂದರ್ಭಿಕ ಚಿತ್ರ)   

ಧಾರವಾಡ: ಆಟೋಗಳಿಗೆ ಮೀಟರ್‌ ಕಡ್ಡಾಯಕ್ಕಾಗಿ ಬುಧವಾರ ಚಾಲನೆ ದೊರೆತರೂ, ಚಾಲಕರು ಮಾತ್ರ ‘ಸಾಹಿತ್ಯ ಸಮ್ಮೇಳನ ನಂತರ ನೋಡೊಣ’ ಎಂದು ಪ್ರತಿಕ್ರಿಯಿಸುವ ಮೂಲಕ ತಮ್ಮ ಹಳೆ ಪದ್ದತಿಯನ್ನೇ ಅನುಸರಿಸಿದ್ದಾರೆ.

ಧಾರವಾಡದ ಹಳೇ ಬಸ್‌ ನಿಲ್ದಾಣ, ಪಾಲಿಕೆ ವೃತ್ತ, ಆಲೂರು ವೆಂಕಟರಾವ್‌ ವೃತ್ತದಲ್ಲಿ ಕೆಲ ನಿಮಿಷ ಗಮನಿಸಿದರೆ ಸಾಕು. ಇಲ್ಲಿ ನಿಗದಿಪಡಿಸಿದ ಸ್ಥಳಕ್ಕಿಂತ ಕಂಡಕಂಡಲ್ಲಿ ಆಟೋಗಳು ಕಂಡು ಬರುತ್ತದೆ. ಸಾಲಿನಲ್ಲಿ ನಿಂತಿರುವ ಆಟೋ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ಹಣ ಕೇಳುತ್ತಿರುವುದು ಕಂಡು ಬರುತ್ತದೆ.

ಹಳೇ ಬಸ್‌ ನಿಲ್ದಾಣದಿಂದ ರೈಲ್ವೇ ಸ್ಟೇಶನ್‌ಗೆ ಹೋಗಲು ಎಷ್ಟು ಎಂದು ಕೇಳಿದರೆ ₹60 ಎಂದು ಆಟೋ ಚಾಲಕರು ಕೇಳುತ್ತಾರೆ. ಮೊದಲಿಗೆ ಹೊಸ ಬಸ್‌ ನಿಲ್ದಾಣಕ್ಕೆ ಹೋಗಲು ಎಷ್ಟು ಜನ ಎಂದು ಕೇಳುತ್ತಾರೆ. ಒಬ್ಬರು ಎಂದರೆ ₹50, ಇಬ್ಬರೂ ಪ್ರಯಾಣಿಕರಿದ್ದರೆ ₹60, ಚೌಕಾಸಿ ಮಾಡಿದರೆ ರೀ ₹40 ಕೊಡ್ರಿ... ಬಹಳ ಚೌಕಾಸಿ ಮಾಡಬ್ಯಾಡ್ರಿ..., ಊರಾಗ ಸಾಹಿತ್ಯ ಸಮ್ಮೇಳನ ಐತಿ ಈ ಸಮಯದಲ್ಲಿ ಚೌಕಾಸಿ ಮಾಡಬ್ಯಾಡ್ರಿ ಎನ್ನುತ್ತಿದ್ದಾರೆ ಎಂದು ಪಿ. ಸಂತೋಷಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಾವು ಪ್ರತಿ ಬಾರಿ ಧಾರವಾಡಕ್ಕೆ ಬಂದಾಗ ಬಸ್‌ ಮೂಲಕ ರೈಲ್ವೇ ಸ್ಟೇಶನ್‌ಗೆ ತೆರಳುತ್ತಿದ್ದೆ. ಇಂದು ತುರ್ತು ಕೆಲಸ ಇರುವುದರಿಂದ ಆಟೋಗಳ ಮೊರೆ ಹೋದೆ. ಆದರೆ ಮೂರು ಆಟೋ ಚಾಲಕರ ಬಳಿ ಹೋಗಿ ಎಷ್ಟಪ್ಪ ಎಂದು ಕೇಳಿದಾಗ ಮನ ಬಂದತೆ ದರ ಹೇಳುತ್ತಿದ್ದಾರೆ. ಅಲ್ಲದೇ ಆಟೋಗಳಿಗೆ ಮೀಟರ್‌ ಅಳವಡಿಸಿಲ್ಲವೇ ಎಂದರೆ ಮೀಟರ್‌ಗೆ ನಿಗದಿಪಡಿಸಿದ ಹಣದಲ್ಲಿ ನಮ್ಮ ಹೊಟ್ಟೆ ತುಂಬುವುದಿಲ್ಲ ಎನ್ನುತ್ತಿದ್ದಾರೆ’ ಎಂದರು ಸಂತೋಷಕುಮಾರ.

‘ಆಟೋಗಳಿಗೆ ಮೀಟರ್‌ ಕಡ್ಡಾಯ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಾಯಿನಗರದಿಂದ ನಾವಂತೂ ₹70ನ್ನು ಕೊಟ್ಟು ಸಿಬಿಟಿಗೆ ಬಂದಿದ್ದೇವೆ. ಅದು ಎರಡು ಆಟೋಗಳನ್ನು ಕೇಳಿದಾಗ ಅವರು ₹100, ₹90 ಎಂದು ಹೇಳಿದ್ದರು. ಸಾಯಿನಗರ ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುವಾಗ ಒಂದು ಆಟೋ ಬಂತು, ಆಗ ಸಿಬಿಟಿ ಎಂದು ಕೇಳಿದಾಗ ಮೊದಲು ಅವನು ಕೂಡ ₹90 ಎಂದು ಹೇಳಿದ. ನಂತರ ಸ್ವಲ್ಪ ಚೌಕಾಸಿ ಮಾಡಿದಾಗ ₹70 ಕೊಡಿ ಎಂದಾಗ ಆಟೋದಲ್ಲಿ ಬಂದಿದ್ದೇವೆ’ ಎಂದು ಸುನಂದಾ ಪವಾರ ಹೇಳಿದರು.

‘ಯಾವ ಸರ್ಕಾರ ಯಾವ ನೀತಿ ತಂದರೆನೂ ನಮ್ಮ ಕೆಲಸದ ಸಂದರ್ಭದಲ್ಲಿ ನಾವು ಸರಿಯಾದ ವೇಳೆಯಲ್ಲಿ ಹೋಗಲು ಆಟೋಗಳ ಮೊರೆ ಹೋಗಬೇಕಾಗುತ್ತದೆ. ಆಗ ಅವರು ಕೇಳಿದಷ್ಟು ಹಣವನ್ನು ನಾವು ನೀಡಲೇ ಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ವಿಧಿ ಇಲ್ಲದೇ ನಾವು ನೀಡಬೇಕಾಗುತ್ತದೆ’ ಎಂದರು ಸುನಂದಾ.

ಈ ಕುರಿತು ಆಟೋ ಚಾಲಕನನ್ನು ವಿಚಾರಿಸಿದಾಗ ಬುಧವಾರವಷ್ಟೇ ಆಟೋಗಳಿಗೆ ಮೀಟರ್‌ ಅಳವಡಿಸಲಾಗಿದೆ. ಎಲ್ಲರೂ ಆಟೋಗಳಿಗೆ ಮೀಟರ್‌ ಅಳವಡಿಕೊಳ್ಳಲು ಸ್ವಲ್ಪ ಸಮಯಬೇಕಾಗುತ್ತದೆ. ಅಲ್ಲದೇ ಮೀಟರ್ ರಿಪೇರಿ ಮಾಡುವವರು ದುಬಾರಿ ಬೆಲೆ ಪಡೆಯುತ್ತಾರೆ. ರಿಪೇರಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂದು ಹೇಳಿದರು.

ಅಲ್ಲದೇ ಕೆಲ ಚಾಲಕರನ್ನು ಕೇಳಿದಾಗ ಇದೀಗ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನ ಮುಗಿದ ಮೇಲೆ ಮೀಟರ್‌ ದರದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತೇವೆ ಎಂದರು.

*
ಬುಧವಾರದಿಂದ ಅವಳಿನಗರದಲ್ಲಿ ಆಟೋಗಳಿಗೆ ಮೀಟರ್‌ ಕಡ್ಡಾಯ ಮಾಡಿದ್ದೇವೆ. ಸಮ್ಮೇಳನದ ನೆಪದಲ್ಲಿ ಮೀಟರ್‌ಗೆ ವಿನಾಯತಿ ಇಲ್ಲ. ಒಂದು ವೇಳೆ ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲು ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ.
– ಬಿ.ಎಸ್‌. ನೇಮಗೌಡ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.