ADVERTISEMENT

ಕರ್ತವ್ಯದಲ್ಲಿ ಕಾರ್ಯಕ್ಷಮತೆ, ಬದ್ಧತೆ ಅಗತ್ಯ: ಐಜಿ ರಾಘವೇಂದ್ರ ಸುಹಾಸ್ ಸಲಹೆ

22ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 11:21 IST
Last Updated 1 ಫೆಬ್ರುವರಿ 2021, 11:21 IST
ಧಾರವಾಡದ ಡಿಎಆರ್ ಕವಾಯತು ಮೈದಾನದಲ್ಲಿ ಸೋಮವಾರ ಜರುಗಿದ ನಿರ್ಗಮನ ಪಥಸಂಚಲನದಲ್ಲಿ ರಾಘವೇಂದ್ರ ಸುಹಾಸ್ ಗೌರವ ವಂದನೆ ಸ್ವೀಕರಿಸಿದರು
ಧಾರವಾಡದ ಡಿಎಆರ್ ಕವಾಯತು ಮೈದಾನದಲ್ಲಿ ಸೋಮವಾರ ಜರುಗಿದ ನಿರ್ಗಮನ ಪಥಸಂಚಲನದಲ್ಲಿ ರಾಘವೇಂದ್ರ ಸುಹಾಸ್ ಗೌರವ ವಂದನೆ ಸ್ವೀಕರಿಸಿದರು   

ಧಾರವಾಡ: ‘ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು’ ಎಂದು ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ರಾಘವೇಂದ್ರ ಸುಹಾಸ ಹೇಳಿದರು.

ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 22ನೇ ತಂಡದ ಹಾಗೂ 2ನೇ ಕಾರಾಗೃಹ ಮಹಿಳಾ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

‘ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮನೋಬಲ ಇರಬೇಕು. ಪ್ರತಿ ಶಿಕ್ಷಣಾರ್ಥಿಗೆ ಆತ್ಮಸ್ಥೈರ್ಯ ತುಂಬುವ ಕೌಶಲವನ್ನು ಕಲಿಸುವ ತರಬೇತಿ ನೀಡಲಾಗುತ್ತಿದೆ. ಇದನ್ನು ತಮ್ಮ ವೃತ್ತಿಜೀನವದುದ್ದಕ್ಕೂ ತಪ್ಪದೇ ಪಾಲಿಸಬೇಕು’ ಎಂದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಇಲಾಖೆಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರೂ ಸೇರುತ್ತಿದ್ದಾರೆ. ಇಲ್ಲಿ ಸೇರಿದರೂ ಮುಂದೆ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವವರಿಗೆ ಅವಕಾಶ ನೀಡಲಾಗುತ್ತದೆ. ಇಂಥ ಅವಕಾಶವನ್ನು ಬಳಸಿಕೊಂಡು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು. ಇಲಾಖೆಯ ಶಿಸ್ತು, ಸಂಯಮ, ಕಾನೂನುಗಳನ್ನು ಪಾಲಿಸಿ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ತವ್ಯಪ್ರಜ್ಞೆ ಮೆರೆಯಬೇಕು’ ಎಂದು ಸುಹಾಸ ಹೇಳಿದರು.

ಹುಬ್ಬಳ್ಳಿ ಧಾರವಡ ಪೊಲೀಸ್ ಆಯುಕ್ತ ಲಾಬುರಾಮ್, ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಎಂ. ಸೋಮಶೇಖರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಡಿಸಿಪಿಗಳಾದ ರಾಮರಾಜನ್, ಆರ್‌.ಬಿ.ಬಸರಗಿ, ಡಿವೈಎಸ್‌ಪಿಗಳಾದ ಎಂ.ಬಿ.ಸಂಕದ, ರಾಮನಗೌಡ ಹಟ್ಟಿ ಇದ್ದರು.

ಡಿಎಆರ್ ವಿಭಾಗದ ಡಿವೈಎಸ್‌ಪಿ ಜಿ.ಸಿ.ಶಿವಾನಂದ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು.

ಆರ್‌ಪಿಐ ಬಿ.ಸಿ.ಡೂಗನವರ ಹಾಗೂ ಆರ್‌ಎಸ್‌ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ಎಚ್. ವನಿತಾ, ಸಂಗೀತಾ ಲಮಾಣಿ, ಪಿ. ಅನಿತಾ ಮತ್ತು ರಾಣಮ್ಮ ನೇತೃತ್ವದ ದಳಗಳು ಪರೇಡ್ ಮೂಲಕ ಗೌರವ ಸಲ್ಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.