ADVERTISEMENT

ಉಪ್ಪಿನಬೆಟಗೇರಿ: ಹಿಂಗಾರು ಬಿತ್ತನೆ ಕಾರ್ಯ ಚುರುಕು

ಬೀಜೋಪಚಾರ ಮಾಡಿ ಬಿತ್ತನೆ ಮಾಡಲು ಕೃಷಿ ಅಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 14:47 IST
Last Updated 5 ನವೆಂಬರ್ 2022, 14:47 IST
ಹನಮನಾಳ ಗ್ರಾಮದ ಹೊಲದಲ್ಲಿ ರೈತರು ಟ್ರ್ಯಾಕ್ಟರ್ ಕೂರಿಗೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು
ಹನಮನಾಳ ಗ್ರಾಮದ ಹೊಲದಲ್ಲಿ ರೈತರು ಟ್ರ್ಯಾಕ್ಟರ್ ಕೂರಿಗೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು   

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಉಪ್ಪಿನಬೆಟಗೇರಿ, ಅಮ್ಮಿನಬಾವಿ, ಹೆಬ್ಬಳ್ಳಿ, ಗರಗ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಪ್ರಸಕ್ತ ವರ್ಷ ಹೆಚ್ಚು ಮಳೆ ಸುರಿದ ಕಾರಣ ಹಿಂಗಾರು ಬಿತ್ತನೆ ವಿಳಂಬವಾಗಿತ್ತು. ಈಗ ಮಳೆ ಬಿಡುವು ಕೊಟ್ಟಿದ್ದು, ಬಿತ್ತನೆಗೆ ಪೂರಕ ವಾತಾವರಣ ಇದೆ. ಹೀಗಾಗಿ ರೈತರು ಜೋಳ, ಕುಸುಬೆ, ಕಡಲೆ ಹಾಗೂ ಇನ್ನಿತರ ಬೆಳೆಗಳ ಬಿತ್ತನೆಯಲ್ಲಿ ತೊಡಗಿದ್ದಾರೆ.

ಕೆಲವು ರೈತರ ಜಮೀನುಗಳಲ್ಲಿ ಮಳೆ ನೀರು ನಿಂತಿದ್ದು, ತೇವಾಂಶ ಆರಿಲ್ಲ. ಮಳೆ ಹೆಚ್ಚು ಆಗಿರುವುದರಿಂದ ಕೃಷಿಭೂಮಿಯಲ್ಲಿ ಬೆಳೆದ ಹುಲ್ಲಿಗೆ ಕಳೆನಾಶಕ ಸಿಂಪಡಿಸಿದ್ದಾರೆ. ಕಸ ಒಣಗಿರುವುದರಿಂದ ಅದನ್ನು ಹರಗಿ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾ
ಗಿದ್ದಾರೆ. ಕೆಲವು ಜಮೀನುಗಳಲ್ಲಿ ಕೈರಂಟೆಯ ಮೂಲಕಜೋಳಮತ್ತು ಕಡಲೆಯನ್ನು ಬಿತ್ತನೆ ಮಾಡಲಾಗಿದೆ.

ADVERTISEMENT

ತಾಲ್ಲೂಕಿನ ಅಮ್ಮಿನಬಾವಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 25 ಗ್ರಾಮಗಳು ಬರುತ್ತವೆ. 2022–23ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 22 ಸಾವಿರ ಹೆಕ್ಟೇರ್‌ನಲ್ಲಿ ಕಡಲೆ, ಕುಸುಬೆ, ಜೋಳ, ಗೋಧಿ ಮೊದಲಾದ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.

‘ಉಪ್ಪಿನಬೆಟಗೇರಿ, ಅಮ್ಮಿನಭಾವಿ, ಹೆಬ್ಬಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರಗಳಲ್ಲಿ 6,500 ಕ್ವಿಂಟಲ್ ಕಡಲೆ, 30 ಕ್ವಿಂಟಲ್ ಜೋಳ, 15 ಕ್ವಿಂಟಲ್ ಗೋಧಿ ಬೀಜವನ್ನು ವಿತರಿಸಲಾಗಿದೆ. ಬೀಜೊಪಚಾರ ಮಾಡಿ ಬಿತ್ತನೆ ಮಾಡಲು ರೈತರಿಗೆ ತಿಳಿಸಲಾಗಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರೇಖಾ ಬೆಳ್ಳಬ್ಬಿ ಮಾಹಿತಿ ನೀಡಿದರು.

‘ಕಡಲೆ ಬೀಜದ 20 ಕೆ.ಜಿ ಪ್ಯಾಕೆಟ್‌ಗೆ ₹900, ಜೋಳದ 3 ಕೆ.ಜಿಗೆ ₹175 ಹಾಗೂ 50 ಕೆ.ಜಿ ರಾಸಾಯನಿಕ ಗೊಬ್ಬರ ದರ 1,400 ಇದೆ. ಕೆಲ ರೈತರು ಮನೆಯಲ್ಲಿ ದಾಸ್ತಾನು ಮಾಡಿದ್ದ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಈ ವರ್ಷ ಹಿಂಗಾರು ಫಸಲು ಕೈ ಹಿಡಿಯುವ ನಿರೀಕ್ಷೆ ಇದೆ’ ಎಂದು ರೈತರಾದ ಬಸಪ್ಪ ಉಳಶೆಟ್ಟಿ, ಬಸಯ್ಯ ಮೂಗಯ್ಯನವರ, ಬಸವರಾಜ ಬೋಬ್ಬಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.