ADVERTISEMENT

ಅನುದಾನದ ಕೊರತೆ: ಅಭಿವೃದ್ಧಿಗೆ ಹಿನ್ನಡೆ

ಯಾದವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸರಮಾಲೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:00 IST
Last Updated 18 ಮೇ 2022, 4:00 IST
ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮದ ರೈತರ ಹೊಲಗಳಿಗೆ ಸಂಪರ್ಕಿಸುವ ಕಚ್ಚಾ ರಸ್ತೆ
ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮದ ರೈತರ ಹೊಲಗಳಿಗೆ ಸಂಪರ್ಕಿಸುವ ಕಚ್ಚಾ ರಸ್ತೆ   

ಧಾರವಾಡ: ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಲಿದ್ದು, ರೈತರು ತಮ್ಮ ಹೊಲಗಳಿಗೆ ಹೋಗಲು ಪಕ್ಕಾ ರಸ್ತೆಗಳಿಲ್ಲ. ಈಗಿರುವ ಕಚ್ಚಾ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು, ಗುಂಡಿಗಳಾಗಿವೆ. ಬೇಸಿಗೆಯಲ್ಲಿಯೇ ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ತಾಲ್ಲೂಕಿನ ಯಾದವಾಡ, ಲಕಮಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಸಾವಿರಾರು ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ಪಕ್ಕಾ ರಸ್ತೆಗಳಿಲ್ಲ. ಕೆಲವೆಡೆ ರಸ್ತೆ ಅಭಿವೃದ್ಧಿಗೆ ರೈತರ ನಡುವಿನ ಗದ್ದಲಗಳಿಂದ ಹಿನ್ನಡೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಆಗುತ್ತಿಲ್ಲ ಎಂಬುದು ರೈತರ ಆರೋಪ.

ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಎರಡು ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆಗಳು ಮರೀಚಿಕೆಯಾಗಿವೆ. ಗ್ರಾಮದಲ್ಲಿ ಗಟಾರ ನಿರ್ಮಾಣ ಹಾಗೂ ಮನೆ ಮನೆಗೆ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಬಿಟ್ಟರೆ ಬೇರೆ ಯಾವ ಹೊಸ ಕಾಮಗಾರಿಗಳು ಆರಂಭವಾಗಿಲ್ಲ. ಈ ಸಂಬಂಧ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಪಂಚಾಯ್ತಿ ಸದಸ್ಯರು ತಿಳಿಸಿದರು.

ADVERTISEMENT

ಲಕಮಾಪೂರ ಗ್ರಾಮದಲ್ಲಿಶುದ್ಧ ಕುಡಿಯವ ನೀರಿನ ಘಟಕ ಸ್ಥಗಿತಗೊಂಡು ಹತ್ತು ತಿಂಗಳಾದರೂ ಈವರೆಗೆ ದುರಸ್ತಿಗೊಳಿಸಿಲ್ಲ. ಗ್ರಾಮಗಳಲ್ಲಿರುವ ಗಟಾರಗಳು ತುಂಬಿದ್ದು,ದುರ್ನಾತ ಬೀರುತ್ತಿವೆ. ಇಷ್ಟಾದರೂ ಗ್ರಾಮ ಪಂಚಾಯ್ತಿಯವರುಸ್ವಚ್ಛತಾ ಕಾರ್ಯಕ್ಕೆ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

‘ಗ್ರಾಮಗಳಲ್ಲಿ ರಸ್ತೆಗಳು, ಚರಂಡಿಗಳು, ಹಳ್ಳಗಳಿಗೆ ಸಿಡಿ ನಿರ್ಮಾಣ, ಕೃಷಿ ಹೊಂಡ, ಬೇಡಿಕೆಗೆ ತಕ್ಕಂತೆ ಶೌಚಾಲಯಗಳ ನಿರ್ಮಾಣ, ಬದುಗಳ ನಿರ್ಮಾಣ, ಅರಣ್ಯೀಕರಣ, ರೈತರ ಹೊಲಗಳ ರಸ್ತೆ ಅಭಿವೃದ್ಧಿ, ನರೇಗಾ ಯೋಜನೆಯಡಿ ಉದ್ಯೋಗ ಇಲ್ಲದವರಿಗೆ 100 ದಿನಗಳ ಉದ್ಯೋಗ ಒದಗಿಸುವುದು, ಇಂಗು ಗುಂಡಿಗಳ ನಿರ್ಮಾಣ, ದನದ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಆದರೆ, ನರೇಗಾ ಕಾಮಗಾರಿಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಇದರಿಂದಾಗಿ ಯೋಜನೆಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮಡಿವಾಳಪ್ಪ ದಿಂಡಲಕೊಪ್ಪ ಅವರು ತಿಳಿಸಿದರು.

ಪ್ರತಿ ಮನೆಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯಲು ನದಿ ನೀರನ್ನು ಒದಗಿಸಬೇಕು ಎಂಬುದು ಸರ್ಕಾರದ ಯೋಜನೆ. ಆದರೆ, ಮುಂದಿನ ಎರಡು ವರ್ಷಗಳ ಕಾಲ ಈಗಿರುವ ಕೊಳವೆಬಾವಿ ನೀರನ್ನೇ ಜನರಿಗೆ ಒದಗಿಸಲು ತಯಾರಿ ನಡೆದಿದೆ. ಈ ಕಾರಣಕ್ಕೆ ಗ್ರಾಮಸ್ಥರು ₹1ಸಾವಿರ ವಂತಿಗೆ ತುಂಬಲು ಹಿಂದೇಟು ಹಾಕುತ್ತಿದ್ದಾರೆ. ನದಿ ನೀರು ಒದಗಿಸಿದರೆ ಮಾತ್ರ ವಂತಿಗೆ ಭರಿಸುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ.

‘ನರೇಗಾ ಯೋಜನೆಯಡಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ, ಭೋಜನಾಲಯ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಆಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ತಿಳಿಸಿದರು.

‘2018ರಿಂದ ಈವರೆಗೆ ವಸತಿ ಯೋಜನೆಯಡಿ ನಿರ್ಮಿಸಲಾಗಿರುವ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಇದರಿಂದ ಫಲಾನುಭವಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಯಾದವಾಡ ಗ್ರಾಮದಲ್ಲಿ ಮನೆ ಮನೆಗೆ ನೀರು ಪೂರೈಸುವ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಟೆಂಡರ್ ಪಡೆದಿರುವ ಗುತ್ತಿಗೆದಾರರಿಂದಲೇ ವಿಳಂಬವಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.