ADVERTISEMENT

ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಿ

ಕಿಮ್ಸ್‌ 59ನೇ ಘಟಿಕೋತ್ಸವ: ಯುವ ವೈದ್ಯರಿಗೆ ಡಾ.ಸಿ.ರಾಮಚಂದ್ರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:15 IST
Last Updated 8 ಮೇ 2022, 4:15 IST
ಹುಬ್ಬಳ್ಳಿಯ ಕಿಮ್ಸ್‌ನ 59ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಹುಬ್ಬಳ್ಳಿಯ ಕಿಮ್ಸ್‌ನ 59ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು   

ಹುಬ್ಬಳ್ಳಿ: ‘ವೈದ್ಯಕೀಯ ಕ್ಷೇತ್ರವು ಗಣನೀಯ ಬದಲಾವಣೆಗಳನ್ನು ಕಂಡಿದೆ. ತಜ್ಞ ವೈದ್ಯರ ಸಂಖ್ಯೆಯೂ ಹೆಚ್ಚಾಗಿದೆ. ಇಂಥ ಸಮಯದಲ್ಲಿ ಯುವ ವೈದ್ಯರ ಮೇಲೆ ಸಾಮಾಜಿಕ ಹೊಣೆಗಾರಿಕೆ ದೊಡ್ಡದಿದೆ. ಚಿಕಿತ್ಸೆಗೆ ಬರುವ ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು’ ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ. ರಾಮಚಂದ್ರ ಅಭಿಪ್ರಾಯಪಟ್ಟರು.

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್‌)ಯ 59ನೇ ಘಟಿಕೋತ್ಸವದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಕೆಲವು ವರ್ಷಗಳ ಹಿಂದೆ ಒಬ್ಬರೇ ವೈದ್ಯರು ಎಲ್ಲ ರೋಗಿಗಳ ತಪಾಸಣೆ ಮಾಡುತ್ತಿದ್ದರು. ಈಗ ತಜ್ಞ ವೈದ್ಯ(ಸ್ಪೆಷಲಿಸ್ಟ್) ಬಳಿಗೆ ಹೋದರೆ ಮಾತ್ರ ಗುಣವಾಗುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿದೆ’ ಎಂದರು.

ADVERTISEMENT

‘ಆಧುನಿಕ ತಂತ್ರಜ್ಞಾನದ ನೆರವಿನಿಂದ ವೈದ್ಯಕೀಯ ಕ್ಷೇತ್ರವು ಸಾಕಷ್ಟು ಬದಲಾವಣೆ ಕಂಡಿದೆ. ಆ ತಂತ್ರಜ್ಞಾನದ ಪ್ರಯೋಜನವನ್ನು ಯುವ ವೈದ್ಯರು ಪಡೆಯಬೇಕು. ಉತ್ತಮ ಹವ್ಯಾಸ, ಅಭ್ಯಾಸ ಮೈಗೂಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಕಿಮ್ಸ್‌ನ ಹಳೆಯ ವಿದ್ಯಾರ್ಥಿಯೂ ಆದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಮಾತನಾಡಿ, ‘ಜೀವನದ ಮೂಲ ಉದ್ದೇಶವೇ ಸಂತೋಷವಾಗಿರುವುದು. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಅದನ್ನು ಕಂಡುಕೊಳ್ಳಬೇಕು’ ಎಂದರು.

ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರತಾನಿ ಮಾತನಾಡಿ, ‘ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಹಣದ ಹಿಂದೆ ಹೋಗಬೇಡಿ. ಕೌಶಲ, ಜ್ಞಾನ ಸಂಪಾದಿಸಿ. ಸಾಧನೆ ಮಾಡಿದರೇ ಹಣ ತಾನಾಗಿಯೇ ಬರುತ್ತದೆ’ ಎಂದು ಹೇಳಿದರು.

ಪ್ರಾಂಶುಪಾಲರಾದ ರಾ.ಈಶ್ವರ ಹೊಸಮನಿ ಮಾತನಾಡಿದರು. ಡಾ.ರವೀಂದ್ರ. ಡಾ.ದ್ಯಾಬೇರಿ, ಕಿಮ್ಸ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.