ADVERTISEMENT

ಕನ್ನಡ ಉಳಿದರೆ ನಾವೂ ಉಳಿಯುತ್ತೇವೆ: ಬೊಮ್ಮಾಯಿ

ಲಕ್ಷ ಕಂಠಗಳಿಂದ ಕನ್ನಡ ಗೀತೆಗಳ ಗಾಯನಕ್ಕೆ ಧನಿಗೂಡಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 14:06 IST
Last Updated 28 ಅಕ್ಟೋಬರ್ 2021, 14:06 IST
‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಹಾಡುಗಳನ್ನು ಹಾಡಿದರು. ಸುರಪುರ ಶಾಸಕ ರಾಜುಗೌಡ ಹಾಗೂ ಕಾಂಗ್ರೆಸ್ ಮುಖಂಡ ಐ.ಜಿ. ಸನದಿ ಇದ್ದಾರೆ
‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಹಾಡುಗಳನ್ನು ಹಾಡಿದರು. ಸುರಪುರ ಶಾಸಕ ರಾಜುಗೌಡ ಹಾಗೂ ಕಾಂಗ್ರೆಸ್ ಮುಖಂಡ ಐ.ಜಿ. ಸನದಿ ಇದ್ದಾರೆ   

ಹುಬ್ಬಳ್ಳಿ: ‘ಕನ್ನಡ ಉಳಿದರೆ ನಾವೂ ಉಳಿಯುತ್ತೇವೆ ಎಂಬ ಭಾವನೆಯಿಂದ ಪ್ರತಿಯೊಬ್ಬರೂ ಕನ್ನಡ ಬಳಸಬೇಕು.ಯಾವ ಭಾಷೆಯ ಬೇರುಗಳು ಗಟ್ಟಿಯಾಗಿರುತ್ತದೊ ಅದನ್ನು ಯಾರಿಂದಲೂ ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಹಂತದಿಂದ ಪದವಿಯವರೆಗೆ ಮಾತೃಭಾಷೆಯಲ್ಲಿ ಕಲಿಯಲು ಆದ್ಯತೆ ನೀಡಲಾಗಿದೆ. ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ರಾಜ್ಯದ 15 ಕಾಲೇಜುಗಳು ಮುಂದೆ ಬಂದಿವೆ. ಕನ್ನಡ ತಂತ್ರಜ್ಞಾನದ ಭಾಷೆಯಾಗಿಯೂ ಬೆಳೆಯಬೇಕಿದ್ದು, ಅದಕ್ಕೆ ಬೇಕಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ’ ಎಂದರು.

ADVERTISEMENT

ಪ್ರತಿ ತಿಂಗಳು ಕಾರ್ಯಕ್ರಮ

‘ಕನ್ನಡಕ್ಕಾಗಿ ನಾವು’ ಅಭಿಯಾನದಂತಹ ಇನ್ನಷ್ಟು ವಿನೂತನ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರಿಗೆ ಸೂಚನೆ ನೀಡುವೆ’ ಎಂದ ಅವರು, ‘ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ಶುಕ್ರವಾರ ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವಾ’, ಡಾ. ಕೆ.ಎಸ್. ನಿಸಾರ್ ಅಹ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಗೀತೆಗಳ ಗಾಯನಕ್ಕೆ ಮುಖ್ಯಮಂತ್ರಿ ಕೂಡ ದನಿಗೂಡಿಸಿದರು.ಸುರಪುರ ಶಾಸಕ ರಾಜುಗೌಡ ಹಾಗೂಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮುಖ್ಯಮಂತ್ರಿಗೆ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.