ADVERTISEMENT

ಒಳ ರಸ್ತೆಗಳ ಅಭಿವೃದ್ಧಿಗೆ ₹40 ಕೋಟಿ

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 15:48 IST
Last Updated 24 ಜನವರಿ 2021, 15:48 IST
ಹುಬ್ಬಳ್ಳಿಯ ಶ್ರೇಯಾ ನಗರದಲ್ಲಿ ಒಳ ರಸ್ತೆಗಳ ಡಾಂಬರೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು
ಹುಬ್ಬಳ್ಳಿಯ ಶ್ರೇಯಾ ನಗರದಲ್ಲಿ ಒಳ ರಸ್ತೆಗಳ ಡಾಂಬರೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು   

ಹುಬ್ಬಳ್ಳಿ: ‘ಲೋಕೋಪಯೋಗಿ ಇಲಾಖೆಯ ₹40 ಕೋಟಿ ಅನುದಾನದಲ್ಲಿ, ಹುಬ್ಬಳ್ಳಿ ನಗರದ ಎಲ್ಲಾ ಒಳರಸ್ತೆಗಳ ಅಭಿವೃದ್ಧಿಪಡಿಸಲಾಗುತ್ತಿದೆ. ಸೆಂಟ್ರಲ್ ವಿಧಾನಸಭಾ ಕ್ಷೇತ್ರದ 35ನೇ ವಾರ್ಡ್‌ಗೆ ₹10 ಕೋಟಿ ಅನುದಾನ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಶ್ರೇಯಾ ನಗರದಲ್ಲಿ ವಾರ್ಡ್ 35ರ ಒಳ ರಸ್ತೆಗಳ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ನಿರೀಕ್ಷಿತ ಮಟ್ಟದಲ್ಲಿ ಪಾಲಿಕೆಗೆ ಆದಾಯ ಬರುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವೊಲಿಸಿ, ಹುಬ್ಬಳ್ಳಿ ಒಳರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ₹40 ಕೋಟಿ ಅನುದಾನ ಪಡೆಯಲಾಗಿದೆ’ ಎಂದರು.

‘ಕೊರೊನಾ ಲಾಕ್‌ಡೌನ್‌ನಿಂದಾಗಿ ಹಣಕಾಸು ಇಲಾಖೆ ಅನುದಾನವನ್ನು ತಡೆ ಹಿಡಿದಿತ್ತು. ನಂತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಕಾಮಗಾರಿ ಮುಂದುವರೆಸಲು ಅನುಮೋದನೆ ಪಡೆಯಲಾಗಿದೆ. ವಾರ್ಡ್ 35 ಹಾಗೂ 36ರ ಶ್ರೇಯಾ ಪಾರ್ಕ್, ಅವೆನ್ಯೂ ನಗರ, ಲಕ್ಷ್ಮೀನಗರ, ಚೇತನಾ ಕಾಲೊನಿ ಸೇರಿದಂತೆ ಎಲ್ಲಾ ನಗರಗಳ ಒಳರಸ್ತೆಗಳ ಡಾಂಬರೀಕರಣ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ವಿದ್ಯಾನಗರದಿಂದ ತೋಳನಕೆರೆವರೆಗೆ ₹44 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ, ಅಂತರರಾಷ್ಟ್ರೀಯ ಮಟ್ಟದ ಉದ್ಯಾನವನ್ನು ತೋಳನಕೆರೆಯಲ್ಲಿ ನಿರ್ಮಿಸಲಾಗುತ್ತಿದೆ. ದಿನವಿಡೀ ನೀರು ಸರಬರಾಜು ಮಾಡುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಎಲ್.ಎನ್.ಟಿ ಕಂಪನಿಯವರು ಸಮೀಕ್ಷೆ ಆರಂಭಿಸಿದ್ದಾರೆ. ಮಾರ್ಚ್ ನಂತರ ಕಾಮಗಾರಿ ಶುರುವಾಗಲಿದೆ. ನಗರ ಅರಣ್ಯೀಕರಣ ಕಲ್ಪನೆಯೊಂದಿಗೆ ಅಕ್ಷಯ ಪಾರ್ಕ್‌ನಲ್ಲಿ ಮಾದರಿ ಉದ್ಯಾನ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ, ಶ್ರೇಯಾನಗರ ನಿವಾಸಿಗಳು ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಪಾಲಿಕೆ ಮಾಜಿ ಸದಸ್ಯ ಮಹೇಶ್ ಬುರ್ಲಿ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.