ADVERTISEMENT

ಕಾರ್ಮಿಕರ ಸಮಸ್ಯೆ ಪರಿಹರಿಸಲು ಬದ್ಧ: ಶಿವಳ್ಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:16 IST
Last Updated 20 ಜನವರಿ 2019, 13:16 IST
ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕ ಆಯೋಜಿಸಿದ್ದ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಮಿಕರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕ ಆಯೋಜಿಸಿದ್ದ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಮಿಕರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಕಾರ್ಮಿಕರ ಪರವಾದ ಕಾನೂನುಗಳನ್ನು ಜಾರಿಗೊಳಿಸಲು ಈ ಸರ್ಕಾರ ಬದ್ಧವಾಗಿದೆ’ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು.

ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕ ಭಾನುವಾರ ಆಯೋಜಿಸಿದ್ದ ‘ಹುಬ್ಬಳ್ಳಿ– ಧಾರವಾಡ ಕಾರ್ಮಿಕರ ಸಮಾವೇಶ’ದಲ್ಲಿ ಮಾತನಾಡಿದರು. ಕಾರ್ಮಿಕ ವರ್ಗ ಕಾಂಗ್ರೆಸ್ ಪಕ್ಷವನ್ನು ಹಿಂದಿನಿಂದಲೂ ಬೆಂಬಲಿಸಿದೆ. ಅಂತಹವರ ಏಳಿಗೆಗಾಗಿ ಕೆಲಸ ಮಾಡಲಾಗುವುದು. ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ, ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ ಮಾತನಾಡಿ, ಕಾರ್ಮಿಕ ವರ್ಗದ ಸಮಸ್ಯೆಗಳು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಲ್ಲಿರುವ ಕೋಟ್ಯಂತರ ಕಾರ್ಮಿಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಹೋರಾಟವನ್ನೂ ನಡೆಸುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಕಾರ್ಮಿಕರ ಪರ ಧ್ವನಿ ಎತ್ತಲಾಗುವುದು ಎಂದರು.

ADVERTISEMENT

ಕಾರ್ಖಾನೆ ನೌಕರರಿಗೆ ಕೇವಲ ₹2 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಕಾರ್ಮಿಕ ಮೃತಪಟ್ಟರೆ ಆತನ ಪತ್ನಿಗೆ ₹1 ಸಾವಿರ ಪಿಂಚಣಿ ಸಿಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕು. ಪಿಂಚಣಿ ಮೊತ್ತವನ್ನು ಏರಿಕೆ ಮಾಡಬೇಕು. 60 ವರ್ಷ ದಾಟಿದ ಎಲ್ಲ ಕಾರ್ಮಿಕರಿಗೆ ಪಿಂಚಣಿ ನೀಡಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ನಾಗರಾಜ ಗುರಿಕಾರ ಒತ್ತಾಯಿಸಿದರು.

ಕಾರ್ಮಿಕರಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ಅಧ್ಯಕ್ಷ ಎಸ್‌.ಎಸ್. ಪ್ರಕಾಶಮ್, ಕಾರ್ಯಾಧ್ಯಕ್ಷ ಡಾ. ಮೋಹನ ರಾವ್ ನಲವಡೆ, ಮಹಾನಗರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕಾರ್ಮಿಕ ವಿಭಾಗದ ಅಧ್ಯಕ್ಷ ಆರ್.ವಿ. ಹಿರೇವಡೆಯರ, ಉಪಾಧ್ಯಕ್ಷರಾದ ನಾಗರಾಜ ನಾಡಕರ್ಣಿ, ಮಂಜುನಾಥ ಈಳಿಗೇರ, ಪ್ರಕಾಶ ಉಳ್ಳಾಗಡ್ಡಿ, ಸಹ ಕಾರ್ಯದರ್ಶಿ ಸಚ್ಚಿದಾನಂದ ರಾಯ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.