ADVERTISEMENT

ಇವಿಎಂ ಮೂರು ಹಂತದಲ್ಲಿ ಪರಿಶೀಲನೆ

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಮುನ್ನ ಅನುಮತಿ ಕಡ್ಡಾಯ: ದೀಪಾ ಚೋಳನ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 10:32 IST
Last Updated 14 ಮಾರ್ಚ್ 2019, 10:32 IST
ಹುಬ್ಬಳ್ಳಿಯಲ್ಲಿ ನಡೆದ ಮಾಧ್ಯಮ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿದರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ಮಾಧ್ಯಮ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಮುನ್ನ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ ಗುರುವಾರ ಆಯೋಜಿಸಿದ್ದ ಮಾಧ್ಯಮ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳ ಸಂಪೂರ್ಣ ವಿವರ ನೀಡಬೇಕು. ಮಾಧ್ಯಮ ಪ್ರಮಾಣೀಕರಣ ಮಂಡಳಿ ಅನುಮತಿ ನೀಡಿದ ನಂತರವೇ, ಅದನ್ನು ಪ್ರಕಟಿಸಬೇಕು. ಅದನ್ನು ನಿರ್ಮಾಣ ಮಾಡಲು ಆಗಿರುವ ಖರ್ಚನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿಗೇ ತಿಳಿಯದಂತೆ ಆತನ ಪರವಾಗಿ ಯಾರಾದರೂ ಜಾಹೀರಾತು ನೀಡಿದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಬಿಇಎಲ್ ಎಂಜಿನಿಯರ್‌ಗಳು ಈಗಾಗಲೇ ಒಂದು ಹಂತದಲ್ಲಿ ಪರಿಶೀಲನೆ ಮುಗಿಸಿದ್ದಾರೆ. ಅಭ್ಯರ್ಥಿಗಳು ಅಂತಿಮವಾದ ನಂತರ ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ.

ADVERTISEMENT

ಒಂದು ವೇಳೆ ದೋಷ ಕಾಣಿಸಿಕೊಂಡರೆ ಅದನ್ನು ಬದಲಾಯಿಸಲಾಗುತ್ತದೆಯೇ ಹೊರತು ರಿಪೇರಿ ಮಾಡುವುದಿಲ್ಲ. ಇದಕ್ಕಾಗಿಯೇ ಎಂಟು– ಬೂತ್ ಸೇರಿ ಒಬ್ಬ ಸೆಕ್ಟರ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಮಾತನಾಡಿ, ನೀತಿ ಸಂಹಿತೆ ಜಾರಿಗೊಳಿಸಲು ಹಾಗೂ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ 10 ಹಾಗೂ ನಗರದ ಒಳಗೆ 13 ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ಐದಾರು ಅಬಕಾರಿ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.

ಅಣಕು ಮಾತದಾನದ ಹಾಗೂ ಇವಿಎಂ, ವಿವಿ ಪ್ಯಾಟ್ ಬಗ್ಗೆ ಮಾಹಿತಿ ನೀಡಲಾಯಿತು. ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ.ಸಿ. ಸತೀಶ, ಧಾರವಾಡ ಎಸ್ಪಿ ಜಿ. ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.