ADVERTISEMENT

ಕಳಪೆ ಮದ್ಯ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:06 IST
Last Updated 5 ಸೆಪ್ಟೆಂಬರ್ 2019, 12:06 IST

ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಸಿದ್ಧಪ್ಪಜ್ಜನ ಗುಡಿ ಹತ್ತಿರ ಅನಧಿಕೃತವಾಗಿ ಕಳಪೆ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಸಾಯಿನಗರ ಮಾದರ ಓಣಿಯ ಆನಂದ ಚವ್ಹಾಣ್‌ ಹಾಗೂ ಉಣಕಲ್‌ನ ಪರಶುರಾಮ ಜಾಲಗಾರ ಬಂಧಿತ ಆರೋಪಿಗಳು. ಇವರಿಂದ3 ಲೀಟರ್‌ ನೀರು ಮಿಶ್ರಿತ ಸ್ಪೀರಿಟ್‌ ಹಾಗೂ ₹10 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಗಲಾಟೆ; ಒಬ್ಬ ಬಂಧನ: ಇಲ್ಲಿನ ಈಶ್ವರ ನಗರದ ಹನುಮಂತ ಗುಡಿ ಬಳಿ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ದಾದಾಪೀರ್‌ ನದಾಫ್‌ ಹಾಗೂ ಲಾಲಸಾಬ್‌ ನದಾಫ್‌ ಗಾಯಗೊಂಡು ಕಿಮ್ಸ್ ದಾಖಲಾಗಿದ್ದಾರೆ.‌

ADVERTISEMENT

ಆರೋಪಿ ರಾಜು ಚಲವಾದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇವನಇಬ್ಬರು ಮಕ್ಕಳಾದ ಶಿವು ಹಾಗೂ ಮಂಜು ಚಲವಾದಿ ನಾಪತ್ತೆಯಾಗಿದ್ದಾರೆ.

ಬುಧವಾರ ಸಂಜೆ ಈಶ್ವರ ನಗರದ ಗುಡಿಯ ಬಳಿ ರಾಜು ಚಲವಾದಿ ಸ್ನೇಹಿತರ ಜತೆ ಕುಳಿತಿದ್ದ. ಆ ವೇಳೆ ಲಾಲಸಾಬ್‌ ಜತೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪದಲ್ಲಿ ರಾಜು, ಲಾಲಸಾಬ್‌ಗೆ ಹೊಡೆದಿದ್ದಾನೆ. ಸಂಜೆ ವೇಳೆ ಲಾಲಸಾಬ್‌ ಮಗ ದಾದಾಪೀರ್‌ನನ್ನು ಕರೆದುಕೊಂಡು ರಾಜು ಚಲವಾದಿ ಮನೆಗೆ ತೆರಳಿ, ಅವರ ಪತ್ನಿ ಜತೆ ಜಗಳ ಆರಂಭಿಸಿದ್ದಾನೆ.

ಇದರಿಂದ ಕೋಪಗೊಂಡ ರಾಜು ಚಲವಾದಿ ಹಾಗೂ ಅವನ ಮಕ್ಕಳಾದ ಶಿವು ಮತ್ತು ಮಂಜು ಕಬ್ಬಿಣದ ರಾಡ್‌ನಿಂದ ದಾದಾಪೀರ್ ತಲೆಗೆ ಹೊಡೆದಿದ್ದಾರೆ. ದಾದಾಪೀರ್ ತಲೆಗೆ ಮೂರು ಹೊಲಿಗೆ ಹಾಕಲಾಗಿದೆ. ಪೊಲೀಸ್‌ ಆಯುಕ್ತ ಆರ್. ದಿಲೀಪ್ ಕಿಮ್ಸ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಇಲ್ಲಿನ ಗೋಕುಲ್ ರಸ್ತೆಯ ಗಾಂಧಿನಗರದ ಮುರಳೀಧರ ಕುಲಕರ್ಣಿ ಅವರ ಮನೆಯ ಇಂಟರ್‌ ಲಾಕ್‌ ಮುರಿದ ಕಳ್ಳರು, ಅಂದಾಜು ₹5.75 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಅಭರಣಗಳನ್ನು ಕಳವು ಮಾಡಿದ್ದಾರೆ.

136 ಗ್ರಾಂ ತೂಕದ ಬಂಗಾರದ ಆಭರಣ, 5 ಕೆಜಿ ಬೆಳ್ಳಿ ಹಾಗೂ ನಗದು ₹50 ಸಾವಿರ ಕಳವು ಮಾಡಿದ್ದಾರೆ ಎಂದು ಮುರುಳೀಧರ ಗೋಕುಲ್‌ ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಂಡ ವಸೂಲಿ: ಅವಳಿ ನಗರದಲ್ಲಿ ಮಂಗಳವಾರಸಂಚಾರ ನಿಯಮ ಉಲ್ಲಂಘನೆ ಮಾಡಿದ 1,362 ಮಂದಿ ವಿರುದ್ಧ ದೂರು ದಾಖಲಿಸಿ, ₹1,81,200 ದಂಡ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.