ADVERTISEMENT

ಜ.25ರಂದು ‘ಸಮೃದ್ಧಿ–ಸಂತೃಪ್ತಿ’ ರಾಷ್ಟ್ರೀಯ ಮಹಿಳಾ ಸಮಾವೇಶ

ಸೆಲ್ಕೊ ಸೋಲಾರ್ ಲೈಟ್‌ನಿಂದ ಆಯೋಜನೆ; ವಿವಿಧ ಕ್ಷೇತ್ರಗಳ ಸಾಧಕರು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 12:54 IST
Last Updated 23 ಜನವರಿ 2020, 12:54 IST

ಹುಬ್ಬಳ್ಳಿ: ‘ಮಹಿಳಾ ಯಶೋಗಾಥೆಗಳ ‘ಸಮೃದ್ಧಿ–ಸಂತೃಪ್ತಿ’ ರಾಷ್ಟ್ರೀಯ ರಾಷ್ಟ್ರೀಯ ಸಮಾವೇಶ ಜ. 25ರಂದು ಧಾರವಾಡದ ಸತ್ತೂರ ಬಳಿ ಇರುವ ಟ್ರಾವೆಲ್ ಇನ್ ಹೋಟೆಲ್‌ನಲ್ಲಿ ಜರುಗಲಿದೆ. ಸೌರಶಕ್ತಿ ಆಧಾರಿತ ಸಂಶೋಧನಾ ಸಂಸ್ಥೆಯಾದ ಸೆಲ್ಕೊ ಸೋಲಾರ್ ಲೈಟ್ ಈ ಸಮಾವೇಶವನ್ನು ಆಯೋಜಿಸಿದೆ’ ಎಂದು ಸೆಲ್ಕೊ ಫೌಂಡೇಷನ್ ಯೋಜನಾ ವ್ಯವಸ್ಥಾಪಕಿ ಭಾರತಿ ಹೆಗಡೆ ಹೇಳಿದರು.

‘ಮಹಿಳೆಯರ ಕಿರು ಉದ್ಯಮಗಳಿಗೆ ಸೌರಶಕ್ತಿ ಹೇಗೆ ಸಹಕಾರಿಯಾಗಬಲ್ಲದು, ಆ ಮೂಲಕ ಮಹಿಳೆಯರು ಆರ್ಥಿಕವಾಗಿ ಹೇಗೆ ಸ್ವಾವಲಂಬಿಗಳಾಗಬಹುದು ಎಂಬ ವಿಷಯಗಳು ಸಮಾವೇಶದಲ್ಲಿ ಚರ್ಚೆಯಾಗಲಿವೆ. ಸೆಲ್ಕೊದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವ್ಯವಹಾರ ಬಂಧುಗಳಿಗೆ (ವುಮೆನ್ ಬಿಸಿನೆಸ್ ಅಸೋಸಿಯೆಟ್ಸ್) ಉತ್ತೇಜನ ನೀಡಲು, ವಿವಿಧ ಕ್ಷೇತ್ರಗಳ ಸಾಧಕರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಸೆಲ್ಕೊ ಮುಖ್ಯಸ್ಥ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ, ಸೆಲ್ಕೊ ಸೋಲಾರ್ ಲೈಟ್ ಸಂಸ್ಥೆಯ ಸಿಇಒ ಮೋಹನ ಭಾಸ್ಕರ ಹೆಗಡೆ, ಇಂಡಿಯಾ ಮೊಯಿಲಿಸ್ ಸಿಇಒ ಮನೀಷಾ ಗಿರೋತ್ರಾ, ಪ್ರಗತಿಪರ ಕೃಷಿ ಉದ್ಯಮಿ ಕವಿತಾ ಮಿಶ್ರಾ ಹಾಗೂ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಶಿರೂರ ಭಾಗವಹಿಸುವರು’ ಎಂದರು.

ADVERTISEMENT

‘ಸಮಾವೇಶದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಸೌರ ಉದ್ಯಮಿಗಳಾದ ಪ್ರೀತಿ ಜ್ಯೋತಿ, ನಿರ್ಮಲಾ ಗಾಣಾಪುರ, ರಾಜೇಶ್ವರಿ ಕುಲಗೋಡ, ಅಶ್ವಿನಿ, ಬೀದರ್‌ನ ಸಮರಸ ಸಂಸ್ಥೆ ಕಾರ್ಯದರ್ಶಿ ವೇದಮಣಿ, ತುಮಕೂರು ಧರ್ಮ ಟೆಕ್ನಾಲಜೀಸ್ ಸಂಸ್ಥಾಪಕಿ ಶೈಲಜಾ ವಿಠ್ಠಲ್, ರ‍್ಯಾಪಿಡ್ ಸಂಸ್ಥೆಯ ನಿರ್ದೇಶಕಿ ವಾಣಿ ಪುರೋಹಿತ್, ಸೇಫ್ ಹ್ಯಾಂಡ್ಸ್ 25X7 ಸಂಸ್ಥೆಯ ಶ್ರಾವಣಿ ಪವಾರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಶಿವದೇವಿ ಮಣ್ಣೂರ, ಹೊಲಿಗೆ ಉದ್ಯಮಿ ಮಾಧವಿ ಕೊಡಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಸಂಜೆ ನಡೆಯುವ ಸಮಾರೋಪದಲ್ಲಿ ಕೆವಿಜಿ ಬ್ಯಾಂಕ್ ಮುಖ್ಯಸ್ಥ ಗೋಪಿಕೃಷ್ಣ, ಮಹಿಳಾ ಹೌಸಿಂಗ್ ಸೇವಾ ಟ್ರಸ್ಟ್ ನಿರ್ದೇಶಕಿ ಬಿಜಲ್ ಬ್ರಹ್ಮ ಭಟ್, ಸಸ್ಟೈನ್ ಟೆಕ್ ಸಂಸ್ಥಾಪಕಿ ಸ್ವಾತಿ ಬೋಗ್ಲೆ ಹಾಗೂ ಮೆಂಡಾ ಫೌಂಡೇಷನ್ ಸಲಹೆಗಾರ ಚತ್ರು ಮೆಂಡಾ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಸೆಲ್ಕೊ ಸಂಸ್ಥೆಯ ಜಗದೀಶ ಪೈಲೂರ, ಸುರೇಶ ಸಾವಳಗಿ, ಪ್ರಸನ್ನ ಹೆಗಡೆ, ಸನಂದನ್ ಹಾಗೂ ಗುರುಮೂರ್ತಿ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.