ಸತೀಶ ಜಾರಕಿಹೊಳಿ
ಹುಬ್ಬಳ್ಳಿ: ‘ಮುಂದಿನ ಮುಖ್ಯಮಂತ್ರಿ ಎಂದು ಎಲ್ಲಾ ಕಡೆ ಕೂಗುತ್ತಾರೆ. ಆದರೆ, ಅದಕ್ಕೆ ಗುರು ಬಲ ಕೂಡಿಬರಬೇಕು. ಶನಿ ಆ ಕಡೆಯಿಂದ ಈ ಕಡೆಗೆ ಹೋಗಬೇಕು. ಕೆಪಿಸಿಸಿ ಅಧ್ಯಕ್ಷ ಆಗುವುದಕ್ಕೂ ಬಹಳಷ್ಟು ಜನರು ತಯಾರಿದ್ದಾರೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘30 ವರ್ಷದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಸುಧಾರಣೆ ಮಾಡಿದ್ದಾರೆ. ಆದರೆ, ಅವರ ವ್ಯಕ್ತಿತ್ವ ಅವರಿಗೆ, ಇವರದ್ದು ಇವರಿಗೆ ಇರುತ್ತದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಅಲ್ಲಿ ಏನಾದರೂ ಕೆಲಸ ಇರುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅವರೇ ಹೇಳಬೇಕು. ನಿಗಮ–ಮಂಡಳಿಗೆ ನೇಮಕ ವಿಚಾರ ಅಂತಿಮವಾಗಲಿದೆ’ ಎಂದರು ತಿಳಿಸಿದರು.
‘ರಣದೀಪ್ ಸುರ್ಜೆವಾಲಾ ಅವರೊಂದಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರ ವಿಚಾರವಾಗಿ ಚರ್ಚೆ ಆಗಿಲ್ಲ. ‘ಸೆಪ್ಟೆಂಬರ್ ಕ್ರಾಂತಿ’ ಬಗ್ಗೆಯೂ ಗೊತ್ತಿಲ್ಲ. ಅದೆನ್ನಲ್ಲ ಸಚಿವ ಕೆ.ಎನ್.ರಾಜಣ್ಣ ಅವರೇ ಹೇಳಬೇಕು’ ಎಂದರು.
‘ಆರ್‌ಎಸ್‌ಎಸ್, ಬಿಜೆಪಿ ಇಲ್ಲದಿದ್ದರೆ ಹಿಂದುತ್ವ ಉಳಿಯುತ್ತಿರಲಿಲ್ಲ’ ಎಂಬ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಆರ್‌ಎಸ್‌ಎಸ್ ಇರದ ಕಾಲದಲ್ಲಿ ಹಿಂದೂ ರಾಷ್ಟ್ರ ಇರಲಿಲ್ಲವಾ? ಮತದಾರರನ್ನು ಹೆದರಿಸೋಕೆ ಬಿಜೆಪಿಯವರು ಹೀಗೆಲ್ಲ ಹೇಳುತ್ತಾರೆ’ ಎಂದರು.
‘ಯೂರಿಯಾ ಗೊಬ್ಬರ ಕೊರತೆ ಇದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದೆ. ಎರಡೂ ಸರ್ಕಾರಗಳು ಸೇರಿ ಸಮಸ್ಯೆ ಪರಿಹಾರ ಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.