ADVERTISEMENT

ಸಚಿವರಿಗೆ ಟಾರ್ಗೆಟ್‌ ನೀಡಿದ್ದ ಸಿದ್ದರಾಮಯ್ಯ; ಸಿ.ಎಂ. ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 6:34 IST
Last Updated 6 ಮಾರ್ಚ್ 2023, 6:34 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ‘ಕಾಂಗ್ರೆಸ್‌ ಭ್ರಷ್ಟಾಚಾರದ ಕೂಪ. ಅವರು ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಟಾರ್ಗೆಟ್‌ ನೀಡಿದ್ದರು. ಭ್ರಷ್ಟಾಚಾರದ ವಿರುದ್ಧ ಬಂದ್‌ ನಡೆಸಲು ಇವರಿಗೆ ಯಾವ ನೈತಿಕತೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಾಸಿಗೆ, ದಿಂಬು, ಬಿಸ್ಕತ್‌, ಕಾಫಿಯಿಂದ ಹಿಡಿದು ದೊಡ್ಡ ದೊಡ್ಡ ನೀರಾವರಿ ಯೋಜನೆಗಳಲ್ಲೂ ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್‌, ಎಚ್‌.ಸಿ.ಮಹದೇವಪ್ಪ ಅವರನ್ನು ಕೇಳಿ’ ಎಂದರು.

‘ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಾಗಿರಬೇಕು. ಆಗ ಅದಕ್ಕೆ ಮಹತ್ವ ಬರುತ್ತದೆ. ಕಾಂಗ್ರೆಸ್ ಪಕ್ಷವೇ ಬಂದ್‌ ಆಗುತ್ತಿದೆ. ಹೀಗಾಗಿ ಅವರು ಕರೆ ನೀಡಿರುವ ಬಂದ್‌ಗೆ ಯಾವುದೇ ಬೆಲೆ ಇಲ್ಲ. ಯಾರು ಸತ್ಯಹರಿಶ್ಚಂದ್ರರು ಎಂಬುದು ಜನರಿಗೆ ಗೊತ್ತಿದೆ. ಇವರ ಆಟ ನಡೆಯುವುದಿಲ್ಲ. ಮೇನಲ್ಲಿ ಚುನಾವಣೆ ನಡೆಯಲಿದ್ದು, ಜನ ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.

ADVERTISEMENT

ಬೆಳಗಾವಿಯ ರಾಜಹಂಸಗಡದಲ್ಲಿ ಶಿವಾಜಿ ಪ್ರತಿಮೆಯನ್ನು ಎರಡನೇ ಬಾರಿಗೆ ಅನಾವರಣ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ‘ಪ್ರತಿಮೆ ನಿರ್ಮಾಣಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹50 ಲಕ್ಷ ನೀಡಿದ್ದರು. ಕೋಟೆ ಸಹ ಸರ್ಕಾರಕ್ಕೆ ಸೇರಿದ್ದು. ಎಲ್ಲರನ್ನೂ ಆಹ್ವಾನಿಸಿ ಉದ್ಘಾಟನೆ ಮಾಡಿದ ನಂತರ ಮತ್ತೆ ಅನಾವರಣ ಮಾಡಿರುವುದು ಹಾಸ್ಯಾಸ್ಪದ’ ಎಂದರು.

‘ಕಾಂಗ್ರೆಸ್‌ನವರು ಒಣ ಪ್ರತಿಷ್ಠೆಗೆ ಈ ರೀತಿ ಮಾಡಿದ್ದಾರೆ. ದೇಶಕ್ಕಾಗಿ ಹೋರಾಡಿದ, ಕ್ರಾಂತಿವೀರ ಶಿವಾಜಿ ಮಹಾರಾಜರ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಹೊಣೆಯನ್ನು ಐಎಸ್‌ಐಎಸ್‌ ಹೊತ್ತುಕೊಂಡಿದೆ. ಸಾದಾ ಕುಕ್ಕರ್‌ ಬಾಂಬ್, ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದ ಡಿ.ಕೆ.ಶಿವಕುಮಾರ್ ಈಗ ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ನೌಕರರೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.