ADVERTISEMENT

ಮಾಸಿಕ ಪ್ರಗತಿ ವರದಿ ನೀಡಿ

ಜಿಲ್ಲಾ ಲಿಡ್ಕರ್ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ: ಪ್ರಸಾದ್ ಅಬ್ಬಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 12:58 IST
Last Updated 23 ಫೆಬ್ರುವರಿ 2019, 12:58 IST
ಬೆಂಗಳೂರಿನ ಚರ್ಮ ತಂತ್ರಜ್ಞಾನ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳೊಂದಿಗೆ ಲಿಡ್ಕರ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಂವಾದ ನಡೆಸಿದರು
ಬೆಂಗಳೂರಿನ ಚರ್ಮ ತಂತ್ರಜ್ಞಾನ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳೊಂದಿಗೆ ಲಿಡ್ಕರ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಂವಾದ ನಡೆಸಿದರು   

ಹುಬ್ಬಳ್ಳಿ: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರು ನಿಗಮದಡಿ (ಲಿಡ್ಕರ್‌) ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲ 16 ಶಾಖಾ ಕಚೇರಿಗಳ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆಯನ್ನು ಶನಿವಾರ ನಡೆಸಿದರು.

ಎಲ್ಲ ಶಾಖೆಗಳ ಜಿಲ್ಲಾ ಸಂಯೋಜಕರಿಂದ ಪ್ರಸಕ್ತ ಸಾಲಿನ ವಹಿವಾಟಿನ ಕುರಿತು ಅಂಕಿ- ಅಂಶಗಳ ಸಮೇತ ಮಾಹಿತಿ ಪಡೆದ ಅವರು, ನಷ್ಟದಲ್ಲಿರುವ ನಿಗಮವನ್ನು ಲಾಭದತ್ತ ಕೊಂಡೊಯ್ಯಲು ಹಾಗೂ ನಿಗಮದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನಿಗಮದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಲಾಭ- ನಷ್ಟದ ವಿಸ್ತೃತ ವರದಿಯನ್ನು ಪ್ರತಿ ತಿಂಗಳು ಕಚೇರಿಗೆ ಸಲ್ಲಿಸಬೇಕು. ಕೆಲಸದಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕಿಲ್ಟ್‌ಗೆ ಭೇಟಿ: ಲಿಡ್ಕರ್ ನಿಗಮದ ಅಂಗ ಸಂಸ್ಥೆಯಾದ ಕರ್ನಾಟಕ ಚರ್ಮ ತಂತ್ರಜ್ಞಾನ ಸಂಸ್ಥೆ (ಕಿಲ್ಟ್‌)ಗೆ ಭೇಟಿ ನೀಡಿ ಪರಿಶೀಲಿಸಿದ ಪ್ರಸಾದ್ ಅಬ್ಬಯ್ಯ, ಅಲ್ಲಿನ ವ್ಯವಸ್ಥೆ, ತರಬೇತಿ, ಹಾಸ್ಟೆಲ್ ಸೌಲಭ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಿಡ್ಕರ್ ನಿಂದ 6 ತಿಂಗಳು ಹಾಗೂ 1 ವರ್ಷದವರೆಗೆ ತರಬೇತಿ ಪಡೆಯುತ್ತಿರುವವರೊಂದಿಗೆ ಸಂವಾದ ನಡೆಸಿದ ಅವರು. ತರಬೇತಿ ನಂತರ ಸ್ವ ಉದ್ಯೋಗಕ್ಕೆ ಬೇಕಾದ ಎಲ್ಲ ರೀತಿಯ ನೆರವು ಒದಗಿಸುವ ಭರವಸೆ ನೀಡಿದರು.

ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ನಟರಾಜನ್, ಕಿಲ್ಟ್ ನಿರ್ದೇಶಕ ಸುನಿಲ್ ಕುಮಾರ್, ಸಲಹಾ ಸಮಿತಿ ಸದಸ್ಯರಾದ ಫರ್ವೇಜ್ ಕೊಣ್ಣೂರು, ವಾಣಿಜ್ಯಾಧಿಕಾರಿ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.