ADVERTISEMENT

ಸರ್ಕಾರ ನಡೆಸುವವರಿಗೆ ಹಲವು ಒತ್ತಡ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 8:57 IST
Last Updated 22 ಡಿಸೆಂಬರ್ 2018, 8:57 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ‘ಸರ್ಕಾರ ನಡೆಸುವವರಿಗೆ ಹಲವು ಒತ್ತಡಗಳಿರುತ್ತವೆ. ನನ್ನನ್ನು ಸಚಿವನನ್ನಾಗಿ ಮಾಡದಿರಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ ನಾನು ಪಕ್ಷ ಸಂಘಟನೆ ಮಾಡಿಲ್ಲ ಎಂಬ ಆರೋಪಗಳಿವೆ. ಆದರೆ, ನನ್ನೊಬ್ಬನಿಂದಲೇ ಪಕ್ಷ ಬೆಳೆಸುವುದು ಆಗುವುದಿಲ್ಲ. ಅದಕ್ಕೆ ಎಲ್ಲರ ಸಹಕಾರವೂ ಬೇಕು’ ಎಂದರು.

‘ಸಚಿವ ಸ್ಥಾನ ನೀಡುವ ಬಗ್ಗೆ ಇದುವರೆಗೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. ಸರಿಯಾಗಿ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಂಬಿಕೆಯಿದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿ ಇರುತ್ತೇನೆ. ನಾನು ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎಷ್ಟೇ ಒತ್ತಾಯ ಮಾಡಿದರೂ ನಾನು ಪಕ್ಷ ತೊರೆದಿಲ್ಲ’ ಎಂದು ಹೇಳಿದರು.

ADVERTISEMENT

‘ಎಲ್ಲ 224 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಸಾಧ್ಯವಿಲ್ಲ’ ಎಂದರು.ಬಿಜೆಪಿಯವರು ಸರ್ಕಾರದ ಪ್ರತಿಯೊಂದು ನಿರ್ಧಾರಕ್ಕೂ ವಿರೋಧ ಮಾಡುವ ಬದಲು ನಮಗೆ ಆಡಳಿತ ನಡೆಸಲು ಬಿಡಬೇಕು. ಸರ್ಕಾರ ಬೀಳಿಸಿ ಚುನಾವಣೆ ಮಾಡುವುದು ಸರಿಯಲ್ಲ. ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಯಾರೂ ಪಕ್ಷ ತೊರೆಯಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.