ADVERTISEMENT

ಸಂಕಷ್ಟಕ್ಕೆ ಮಿಡಿದರು; ಮಾನವೀಯತೆ ತೋರಿದರು

ಸಂಘಗಳಿಂದ ನೆರವಿನ ಮಹಾಪೂರ, ಗಮನ ಸೆಳೆದ ಸಂಚಾರ ದಾನಿಗಳು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 16:04 IST
Last Updated 4 ಏಪ್ರಿಲ್ 2020, 16:04 IST
ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಸಂಚಾರಿ ದಾನಿಗಳ ತಂಡದವರು ಶನಿವಾರ ಆಹಾರ ಪೊಟ್ಟಣ ನೀಡಿದರು
ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಸಂಚಾರಿ ದಾನಿಗಳ ತಂಡದವರು ಶನಿವಾರ ಆಹಾರ ಪೊಟ್ಟಣ ನೀಡಿದರು   

‌ಹುಬ್ಬಳ್ಳಿ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಅನೇಕ ಜನ ಅತಂತ್ರರಾಗಿದ್ದಾರೆ. ದುಡಿಯುವ ಕಾರ್ಮಿಕ ವರ್ಗ ಕೆಲಸವಿಲ್ಲದೇ ಮನೆಯಲ್ಲಿದ್ದಾರೆ. ನಿತ್ಯದ ಕೂಲಿಯನ್ನೇ ನಂಬಿಕೊಂಡ ಅನೇಕ ಕುಟುಂಬಗಳು ಆಸರೆಗಾಗಿ ಎದುರು ನೋಡುತ್ತಿವೆ.

ಕೋವಿಡ್‌ 19 ಹಿಮ್ಮೆಟ್ಟಿಸಲು ಪೊಲೀಸರು, ವೈದ್ಯರು ಸೇರಿದಂತೆ ಬಹಳಷ್ಟು ಜನ ಶ್ರಮ ಪಡುತ್ತಿದ್ದಾರೆ. ಅವರಿಗಾಗಿ ವಿವಿಧ ಸಂಘ, ಸಂಸ್ಥೆಗಳು ಮಿಡಿಯುತ್ತಿವೆ. ವೈಯಕ್ತಿಕವಾಗಿ ಅನೇಕ ದಾನಿಗಳು ಸೋಂಕು ತಗುಲುವು ಭೀತಿಯ ನಡುವೆಯೂ ದಿನಸಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಹಂಚುತ್ತಿದ್ದಾರೆ. ಇನ್ನೂ ಕೆಲವರು ಸ್ಯಾನಿಟೈಸರ್‌, ಮುಖಗವಸು, ಹ್ಯಾಂಡ್‌ ಗ್ಲೌಸ್‌ ಹೀಗೆ ಅನೇಕ ಸುರಕ್ಷಾ ಸಲಕರಣೆಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇನ್ನೂ ಕೆಲವರು ಸುರಕ್ಷತೆಯ ಪಾಠ ಹೇಳಿ, ಲಾಕ್‌ಡೌನ್‌ ಮಹತ್ವವನ್ನು ತಿಳಿಹೇಳುತ್ತಿದ್ದಾರೆ.

ನ್ಯೂ ಕಾಟನ್‌ ಮಾರ್ಕೆಟ್‌ ರಸ್ತೆಯಲ್ಲಿರುವ ಮಹಾವೀರ ಆಯಿಲ್‌ ಎಜೆನ್ಸಿಸ್‌ ಪೆಟ್ರೋಲ್‌ ಬಂಕ್‌ಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಇಲ್ಲವಾದರೆ ಬಂಕ್‌ನ ಮಾಲೀಕ ಅಶ್ಫಾಕ್‌ ಕುನ್ನಿಗಾವಿ ಮಾಸ್ಕ್‌ ನೀಡಿ ‘ಅಗತ್ಯವಿದ್ದರಷ್ಟೇ ಹೊರಗಡೆ ಓಡಾಡಿ. ದಯವಿಟ್ಟು ಹೊರಗೆ ಬರಬೇಡಿ’ ಎಂದು ಕೈ ಮುಗಿದು ವಿನಂತಿಸಿಕೊಳ್ಳುತ್ತಾರೆ. ಅಶ್ಪಾಕ್‌ ಮಾರ್ಚ್‌ 23ರಿಂದ ನಿತ್ಯ ಮಾಸ್ಕ್‌ಗಳನ್ನು ಗ್ರಾಹಕರಿಗೆ ವಿತರಿಸಿ ಗಮನ ಸೆಳೆಯುತ್ತಿದ್ದಾರೆ.

ADVERTISEMENT

‘ನಮ್ಮ ಸೈನಿಕರ (ಬಂಕ್‌ ಸಿಬ್ಬಂದಿ) ಸುರಕ್ಷತೆ ನಮಗೆ ಮುಖ್ಯ. ಜನರ ಕಾಳಜಿಯೂ ಅಗತ್ಯ. ಆದ್ದರಿಂದ ಬಂಕ್‌ಗೆ ಬರುವವರಿಗೆ ತಿಳಿಹೇಳಿ ಹೊರಗಡೆ ಅಡ್ಡಾಡದಂತೆ ವಿನಂತಿಸಿಕೊಳ್ಳುತ್ತೇನೆ’ ಎಂಂದು ಅಶ್ಫಾಕ್‌ ಹೇಳಿದರು.

ಹೆಗ್ಗೇರಿಯ ಫತೇಶಾ ನಗರದ ಫಯಾಜ್‌ ಬಳ್ಳಾರಿ, ಮೊಹಮ್ಮದ್ ಇಲಿಯಾಸ್‌, ‌ಸೈಯದ್‌ ತೋಸಿಫ್‌, ಅಮೀರ್‌ ಸೊಹೈಲ್‌ ಸ್ನೇಹಿತರನ್ನು ಒಳಗೊಂಡ ಸಂಚಾರಿ ತಂಡ ನಗರ ಪ್ರಮುಖ ರಸ್ತೆಗಳಿಗೆ ಹೋಗಿ ನಿರ್ಗತಿಕರಿಗೆ, ಪೊಲೀಸರಿಗೆ, ಮಾಧ್ಯಮದವರಿಗೆ ಆಹಾರ, ನೀರು ನೀಡುವ ಕೆಲಸ ಮಾಡುತ್ತಿದೆ. ಮೂರು ದಿನಗಳ ಹಿಂದೆ ಈ ಕಾರ್ಯ ಆರಂಭಿಸಿರುವ ಇವರ ತಂಡದಲ್ಲಿರುವ 20 ಜನ ಸದಸ್ಯರು ನಗರದ ಬೇರೆ ಬೇರೆ ಕಡೆ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ.

ವಿ.ಬಿ. ಡಂಗನವರ ಪ್ರತಿಷ್ಠಾನ ನಿತ್ಯ ಒಂದಲ್ಲ ಒಂದು ಪ್ರದೇಶದಲ್ಲಿ ಆಹಾರ ಪೊಟ್ಟಣ, ಕುಡಿಯುವ ನೀರು ಕೊಡುತ್ತಿದೆ. ಸದಾನಂದ ಡಂಗನವರ, ರಾಜಣ್ಣ ಪವಾರ್‌, ಸುಪ್ರೀತ್‌ ಶೆಟ್ಟಿ, ಮಲ್ಲಿಕ್‌ ಸಿಕಂದರ್‌, ವೀರಣ್ಣ ಡಂಗನವರ, ನಾಗರಾಜ, ಕಿತ್ತೂರು ಅವರನ್ನೊಳಗೊಂಡ ತಂಡ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ, ನಿರಾಶ್ರಿತರಿಗೆ ನೆರವಿನ ಹಸ್ತ ಚಾಚುತ್ತಿದೆ.

ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ, ನೈರುತ್ಯ ರೈಲ್ವೆ, ಅಂಜುಮನ್ ಸಂಸ್ಥೆ, ಕ್ಷಮತಾ ಸೇವಾ ಸಂಸ್ಥೆ, ಸಮತಾ ಸೈನಿಕ ದಳ, ಕರ್ನಾಟಕ ರಕ್ಷಣಾ ವೇದಿಕೆ, ಸಾವಿತ್ರಿಬಾಯಿ ಫುಲೆ ಸಾಮಾಜಿಕ ಕಲ್ಯಾಣ ಟ್ರಸ್ಟ್‌, ಕೆ.ಎಂ.ಎಫ್‌ ಹೀಗೆ ಹಲವಾರು ಸಂಘಟನೆಗಳು ಉದಾರವಾಗಿ ನೆರವಿನ ಹಸ್ತ ಚಾಚುತ್ತಿವೆ. ಮಾನವೀಯತೆಯ ಪ್ರೀತಿ ತೋರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.